Advertisement

ಅದಿರು ಹರಾಜಿಗೆ ಕ್ರಮ ವಹಿಸಲು ಸಿಎಂ ಸೂಚನೆ

07:32 AM May 30, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮುಟ್ಟುಗೋಲು ಹಾಕಿಕೊಂಡ 8 ಮಿಲಿಯನ್‌ ಟನ್‌ ಅದಿರು ಹರಾಜಾಗದೇ ಉಳಿದಿದ್ದು, ಅದರ ಹರಾಜು ಪ್ರಕ್ರಿಯೆಗಿರುವ ತಾಂತ್ರಿಕ ತೊಂದರೆಗಳ ಕುರಿತು ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ  ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ರಾಜ್ಯದಲ್ಲಿ ರದ್ದುಪಡಿಸಲಾದ “ಸಿ’ ವರ್ಗದ ಗಣಿ ಗುತ್ತಿಗೆ, ಸ್ಟಾಕ್‌ ಯಾರ್ಡ್‌ ಮತ್ತು ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2016 ಕ್ಕೂ ಮೊದಲು ಮುಟ್ಟುಗೋಲು ಹಾಕಿಕೊಂಡಿರುವ ಅದಿರಿನ ವಿಲೇವಾರಿಗೆ ಗಮನ ಹರಿಸುವಂತೆ ಸೂಚಿಸಿದರು. ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ ಅಕ್ರಮ  ಕಲ್ಲು ಗಣಿಗಾರಿಕೆ ನಡೆಸುವುದರ ತಡೆಗೆ ಡ್ರೋಣ್‌ ಸರ್ವೇ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು.

ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರಿನ  ಖನಿಜಾನೇಷಣೆಗೆ ತ್ವರಿತವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಖನಿಜಾನ್ವೇಷಣೆ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಚಿವ ಸಿ.ಸಿ.ಪಾಟೀಲ್‌ ಮಾತನಾಡಿ, ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಣೆಗೆ ಗುತ್ತಿಗೆದಾರರಿಂದ ರಾಜಧನದ ಶೇ. 10ರಷ್ಟು ಹಾಗೂ ಶೇ. 30ರಷ್ಟು ಅನ್ವಯವಾಗುವಂತೆ ಜಿಲ್ಲಾ ಪ್ರತಿಷ್ಠಾನ ನಿಧಿಗೆ ಈವರೆಗೆ 28 ಕೋಟಿ ರೂ. ವಂತಿಗೆ ಸಂಗ್ರಹವಾಗಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್‌- 19  ವೈರಸ್‌ ನಿಯಂತ್ರಣಕ್ಕೆ ಈ ಹಣ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌ ಪ್ರಸಾದ್‌, ಇಲಾಖೆ ಪ್ರಧಾನ  ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌, ನಿರ್ದೇಶಕ ಶಿವಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next