Advertisement

ಜಕ್ಕೂರು ಬಳಿ ಮಾದರಿ ಪಾರಂಪರಿಕ ಗ್ರಾಮ: ಸಿಎಂ ಉದ್ಘಾಟನೆ

12:46 PM Nov 14, 2020 | Suhan S |

ಬೆಂಗಳೂರು: ಜಕ್ಕೂರು ಬಳಿ ನಿರ್ಮಾಣವಾಗಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟನೆ ಮಾಡಿದರು.

Advertisement

ಗ್ರಾಮೀಣ ಪ್ರದೇಶದ ಜೀವನ ಶೈಲಿಯನ್ನುಪುನರ್‌ ಸ್ಥಾಪಿಸಿರುವ ಪಾರಂಪರಿಕ ಗ್ರಾಮಲಕ್ಷಾಂತರ ಜನರನ್ನು ಆಕರ್ಷಿಸುವಂತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಪಾರಂಪರಿಕ ಗ್ರಾಮ ವೀಕ್ಷಣೆ ಮಾಡಿ ಮಾತನಾಡಿದ ಅವರು, ಜಕ್ಕೂರು ಬಳಿ 13 ಕೋಟಿರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಾದರಿ ಗ್ರಾಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ ಇಲಾಖೆಯಿಂದ ನಿರ್ಮಾಣ ಮಾಡಲಾಗಿದೆ. ಈ ಗ್ರಾಮ ನಿರ್ಮಾಣ ಮಾಡಿರುವ ಕಲಾವಿದರನ್ನು ಎಷ್ಟುಹೊಗಳಿದರೂ ಸಾಲದು. ಅಷ್ಟು ನೈಜವಾಗಿ ಮೂಡಿ ಬಂದಿದೆ. ಗ್ರಾಮೀಣ ಸೊಗಡನ್ನು ಪರಿಚಯಿಸುವ ಮೊದಲ ಪಾರಂಪರಿಕ ಗ್ರಾಮ ಇದಾಗಿದೆ. ಯಾರೇ ಆಗಲಿ ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿ ಕೊಳ್ಳುವಂತಾಗಲಿ ಎಂದು ಹೇಳಿದರು.

ರಾಜ್ಯದಲ್ಲೇ ವೈಶಿಷ್ಟ್ಯ ಪೂರ್ಣವಾದ ಗ್ರಾಮ ಇದು. ಇವತ್ತು ಇದರ ಗೃಹಪ್ರವೇಶ ಮಾಡಿದ್ದೇವೆ. ಈ ಗ್ರಾಮ ರೂಪುಗೊಳ್ಳಲು ಪ್ರಮುಖ ಕಾರಣಕರ್ತರು ಸ್ಥಳೀಯ ಶಾಸಕರಾದ ಕೃಷ್ಣಬೈರೇಗೌಡ. ಕರ್ನಾಟಕ ರಾಜ್ಯ ಹೇಗಿತ್ತು. ಹಿಂದೆ ಪ್ರತಿಯೊಬ್ಬ ವ್ಯಕ್ತಿ ಏನು ಮಾಡುತ್ತಿದ್ದ ಎಂಬುದನ್ನು ಇಲ್ಲಿ ಬಂದು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.

ಮನೆ ಮನೆಗೆ ನೀರು ಸರಬರಾಜು: ಈ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಕುಡಿವ ನೀರಿನಯೋಜನೆಗೆ 1000 ಕೋಟಿ ರೂ.ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹ ಯೋಗದೊಂದಿಗೆ ಮನೆಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಿದೆ ಎಂದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಇದನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಉದ್ದೇಶಿಸಿದ್ದೇವೆ. ಶಾಲಾ ಮಕ್ಕಳಿಗೆ ಇದನ್ನು ತೋರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದ ಪ್ರವೇಶ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದರು.

ಮಾಜಿ ಸಚಿವ ಕೃಷ್ಣಬೈರೇಗೌಡ, ಮಾದರಿ ಪಾರಂಪರಿಕ ಗ್ರಾಮ ನಮ್ಮ ಮೂರು ವರ್ಷಗಳ ಕನಸು. ಆ ಕನಸು ನನಸಾದ ಸಾರ್ಥಕತೆ ನಮ್ಮದು. ನಮ್ಮ ಗ್ರಾಮೀಣ ಪರಂಪರೆಯನ್ನು ಇಲ್ಲಿ ಬಹಳ ಅದ್ಬುತವಾಗಿಪ್ರಸ್ತುತ ಪಡಿಸಿದ್ದಾರೆ. ಇದು ಹಿಂದಿನ ಗ್ರಾಮೀಣಾಭಿವೃದ್ಧಿಸಚಿವಎಚ್‌ಕೆ.ಪಾಟೀಲರ ಕನಸಿನ ಕೂಸು. ಆಗ ಅವರು 5ಕೋಟಿ ರೂ. ಆರಂಭಿಕ ಅನುದಾನ ನೀಡಿ ಶಂಕುಸ್ಥಾಪನೆ ಮಾಡಿದ್ದರು. ಈ ಗ್ರಾಮದ ನಿರ್ಮಾತೃ ಶೋಭಕ್ಕನವರ್‌ ಹಾವೇರಿ ಹುಬ್ಬಳ್ಳಿ ಬಳಿ ಇಂತಹುದ್ದೇ ಮಾದರಿ ಗ್ರಾಮ ನಿರ್ಮಿಸಿದ್ದಾರೆ. ಅದನ್ನು ನೋಡಿದ ಮೇಲೆ ಬೆಂಗಳೂರು ನಗರದಲ್ಲೂ ಇಂತಹ ಮಾದರಿ ಗ್ರಾಮ ರೂಪಿಸಬೇಕು ಎಂದು ಉದ್ದೇಶಿಸಿದ್ದೇವು. ನಮ್ಮ ಪ್ರಯತ್ನ ಸಾರ್ಥಕ ಎನಿಸುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next