ಚನ್ನರಾಯಪಟ್ಟಣ: ತಾಲೂಕಿನ ದಂಡಿನಗಹಳ್ಳಿ ಹೋಬಳಿ ಎರಡು ಪ್ರಮುಖ ಏತನೀರಾವರಿಗೆ ಫೆ.15ರಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಶಂಕುಸ್ಥಾಪನೆ ಮಾಡುವ ಮೂಲಕ ಈ ಭಾಗದ ನೀರಿನ ಸಮಸ್ಯೆ ಬಗೆ ಹರಿಸಲಿದ್ದಾರೆ ಎಂದು ಜಿಲ್ಲಾ ಮಂತ್ರಿ ಎಚ್.ಡಿ. ರೇವಣ್ಣ ಭರವಸೆ ನೀಡಿದರು.
ತಾಲೂಕಿನ ಉದಯಪುರ ಗ್ರಾಮದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಈಗಾಗಲೇ ದೋಸ್ತಿ ಸರ್ಕಾರದ ಬಜೆಟ್‌ನಲ್ಲಿ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತನೀರಾವರಿಗೆ 100 ಕೋಟಿ ರೂ., ಆಲಗೊಂಡನಹಳ್ಳಿ ಏತ ನೀರಾವರಿಗೆ 41 ಕೋಟಿ ರೂ. ಮೀಸಲಿಡಲಾಗಿದೆ.
ಚುನಾವಣೆ ವೇಳೆ ನಾನು ಹಾಗೂ ಕುಮಾರಸ್ವಾಮಿ ಹೋಬಳಿ ಜನ ತೆಗೆ ಭರವಸೆ ಈಡೇರಿಸಿದ್ದೇವೆ ಎಂದರು. ಶೀಘ್ರದಲ್ಲಿ ಕಾಮಗಾರಿ ಮುಕ್ತಾಯ ಮಾಡಿ ಎರಡನೇ ಹಂತದ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಉದಯಪುರದ ಬಾಲಕಿರ ವಸತಿ ನಿಲಯ ಆರಂಭಿಸಿ ದಂಡಿಗನಹಳ್ಳಿ ಹೋಬಳಿಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗು ವುದು. ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದು, ಹೋಬಳಿಯ ಎಲ್ಲಾ ಗ್ರಾಮಗಳ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದರು.
ತಹಶೀಲ್ದಾರ್ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್, ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮಿ, ಎಪಿಎಂಸಿ ನಿರ್ದೇಶಕ ರಂಗಸ್ವಾಮಿ ಇದ್ದರು.