Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಭವಿಷ್ಯದಲ್ಲಿ ಎದುರಾಗುವಂತಹ ಜಲ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ನೀರಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.
Related Articles
Advertisement
ಹಿಂದಿನ 17 ವರ್ಷಗಳ ಪೈಕಿ 15 ವರ್ಷಗಳಲ್ಲಿ ರಾಜ್ಯ ಬರಗಾಲ ಅನುಭವಿಸಿದ್ದು, 2011ರಲ್ಲಿ 123 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಅದೇ ರೀತಿ 2012ರಲ್ಲಿ 157, 2013ರಲ್ಲಿ 125, 2014 ರಲ್ಲಿ 35, 2015ರಲ್ಲಿ 136, 2016ರಲ್ಲಿ 110, 2017ರಲ್ಲಿ 162, 2018ರಲ್ಲಿ 156 ತಾಲೂಕುಗಳು ಬರಕ್ಕೆ ತತ್ತರಿಸಿವೆ. ಹಿಂದೆ 20-30 ಅಡಿಗಳಲ್ಲಿ ನೀರು ದೊರೆಯುತ್ತಿತ್ತು. ಆದರಿಂದು ಕೆಲವು ಜಿಲ್ಲೆಗಳಲ್ಲಿ 1500 ಅಡಿ ಹೋದರೂ ನೀರು ದೊರೆಯದಂತಹ ಪರಿಸ್ಥಿತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಪಂಚಾಯಿತಿಯಿಂದ ಕೊಡಗು ಪ್ರವಾಹ ಸಂತ್ರಸ್ತರಿಗೆ 95 ಲಕ್ಷ ರೂ. ಮೊತ್ತದ ಚೆಕ್ ದೇಣಿಗೆ ನೀಡಲಾಯಿತು. ಜತೆಗೆ ಜಲಾಮೃತ ಆಂದೋಲನದ ಲಾಂಛನ ಬಿಡುಗಡೆಗೊಳಿಸಲಾಯಿತು. ಈ ವೇಳೆ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಕೆ.ಶಿವಕುಮಾರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಇಲಾಖೆಯ ಹೆಚ್ಚುವರಿ ಅಭಿವೃದ್ಧಿ ಆಯುಕ್ತೆ ವಂದನಾ ಶರ್ಮಾ ಹಾಜರಿದ್ದರು.
ನಾಲ್ಕು ಅಂಶಗಳ ಮಹತ್ವಜಲಸಂರಕ್ಷಣೆ: ಯೋಜನೆಯನ್ವಯ ಜಲಮೂಲಗಳ ಪುನಶ್ಚೇತನಗೊಳಿಸಲಾಗುತ್ತದೆ. ಅದರಂತೆ 7 ನದಿಗಳು, 36,000 ಕೆರೆಗಳು ಹಾಗೂ ಲಕ್ಷಾಂತರ ಗೋಕಟ್ಟೆ, ಬಾವಿ, ಕಲ್ಯಾಣಿಗಳ ಪೈಕಿ ಶೇ.50 ರಷ್ಟು ಅತಿಕ್ರಮಣ ಹಾಗೂ ಹೂಳು ತುಂಬಿವೆ. ಹೀಗಾಗಿ ಅವುಗಳನ್ನು ಪುನಶ್ಚೇತನ ಹಾಗೂ ಹೊಸ ಜಲಮೂಲಗಳನ್ನು ಸೃಜಿಸಲಾಗುತ್ತದೆ. 2 ವರ್ಷಗಳಲ್ಲಿ 14,000 ಜಲಮೂಲಗಳ ಪುನಶ್ಚೇತನ, 12,000 ಚೆಕ್ ಡ್ಯಾಂ, ಕಿಂಡಿ ಅಣೆಕಟ್ಟು, ಸಣ್ಣ ಜಲಾಶಯ ನಿರ್ಮಿಸುವ ಗುರಿ ಇದೆ. ಜಲ ಸಾಕ್ಷರತೆ: ನೀರಿನ ಮಿತವ್ಯಯ, ಪೋಲು ತಡೆಗಟ್ಟುವುದು, ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಜಲಪ್ರಜ್ಞೆ: ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯ, ಶಿಕ್ಷಕರು, ಜಲತಜ್ಞರನ್ನೊಳಗೊಂಡು ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ಹಸಿರೀಕರಣ: ಪ್ರತಿ ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಟ್ಟು ಪೋಷಿಸಿ, ಐದು ವರ್ಷಗಳ ಬಳಿಕ ಗಣತಿ ಮಾಡಿಸಲಾಗುತ್ತದೆ. ಸರ್ಕಾರದಿಂದ ಗ್ರಾಮಗಳಿಗೆ ಪೂರೈಕೆ ಮಾಡುತ್ತಿರುವ ನೀರನ್ನು ಪ್ರತಿಯೊಂದಕ್ಕೂ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರದಿಂದ ಪೂರೈಕೆ ಮಾಡುವ ನೀರಿಗೆ ದರ ನಿಗದಿಪಡಿಸಬೇಕಿದೆ. ಇದರಿಂದಾಗಿ ಜನರಲ್ಲಿ ನೀರು ಉಳಿಸುವ ಮನೋಭಾವ ಬೆಳೆಯಲಿದೆ. ಎತ್ತಿನ ಹೊಳೆ ಯೋಜನೆಯಿಂದ ಮೂರು ತಿಂಗಳು ಮಾತ್ರ ನೀರು ದೊರೆಯಲಿದ್ದು, ನಾಲೆಯಿಂದ ಪಂಪ್‌ಸೆಟ್ ಹಾಕಿ ನೀರು ತೆಗೆಯದಂತೆ ಕಾನೂನು ಜಾರಿಗೊಳಿಸಲಾಗುವುದು.
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ.