Advertisement
ಬುಧವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ಮೂಲಕ ತೂಬಿನಕೆರೆ ಹೆಲಿಪ್ಯಾಡ್‌ಗೆ ಆಗಮಿಸಿ ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ವೇದಿಕೆಗೆ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಯ 1.12 ಲಕ್ಷ ರೈತರಿಗೆ ಸಾಲ ತೀರುವಳಿ ಪತ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ 8 ಸಾವಿರಕ್ಕೂ ಹೆಚ್ಚು ಮಂದಿ ರೈತರಿಗೆ ಸಾಲ ತೀರುವಳಿ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ವಿತರಿಸುವರು ಎಂದು ಹೇಳಿದರು. ಸಾತನೂರು ಫಾರಂನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯ 400 ರಿಂದ 500 ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರ್ಖಾನೆಗೆ ಈಗಾಗಲೇ ಯೋಜನೆ ಸಿದ್ಧಗೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗಿದ್ದು, ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇದಲ್ಲದೆ, ಪಿಎಸ್‌ಎಸ್‌ಕೆ ಅಭಿವೃದ್ಧಿಗೆ ರೈತರ ನಿರ್ಣಯದಂತೆ ಖಾಸಗೀಕರಣಗೊಳಿಸಿ ಮೇ ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.
ಮಂಡ್ಯದಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ 56 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ, ಮೂಲಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಲಾಗ್ರಾಮ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಜಿಪಂ ಮಾಜಿ ಸದಸ್ಯ ವಿಜಯಾನಂದ ಇದ್ದರು.
ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಶ್ರಮ – ಪುಟ್ಟರಾಜು: ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಎಲ್ಲ ಶಾಸಕರು ಒಗ್ಗೂಡಿ ಗೆಲುವಿಗೆ ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಸ್ಪರ್ಧಿಸುವಂತೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುತ್ತಿದ್ದಾರೆ. ನಿಖೀಲ್ ಸ್ಪರ್ಧೆ ಸಂಬಂಧ ಚರ್ಚೆ ನಡೆಯುತ್ತಿದೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಪಕ್ಷದವರೂ ಸಹ ಸ್ಪರ್ಧೆ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೈತ್ರಿಯಾದ ಬಳಿಕ ಎಲ್ಲವೂ ತೀರ್ಮಾನವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್‌ನಿಂದ ಸುಮಲತಾ ಅವರಿಗೆ ಅವಕಾಶ ನೀಡಬಾರದು ಎಂದು ದೇವೇಗೌಡರೇ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟ್ಟರಾಜು, ದೇವೇಗೌಡರಿಗೆ ಅಂತಹ ದುರ್ಗತಿ ಬಂದಿಲ್ಲ, ಬರುವುದೂ ಇಲ್ಲ ಎಂದು ಛೇಡಿಸಿದರು.ಸೇನೆ ಕಾರ್ಯಾಚರಣೆಗೆ ಶ್ಲಾಘನೆ: ನಮ್ಮ ರಾಷ್ಟ್ರದ ಸೇನೆ ಸದೃಢವಾಗಿದೆ. ಎಂತಹ ಪರಿಸ್ಥಿತಿಯನ್ನೂ ಎದುರಿಸುತ್ತದೆ ಎನ್ನುವುದಕ್ಕೆ ಮಂಗಳವಾರ ಮುಂಜಾನೆ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸ ಮಾಡಿರುವುದೇ ಸಾಕ್ಷಿ. ಸೇನೆಯ ಕಾರ್ಯ ಶ್ಲಾಘನೀಯ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಶ್ಲಾ ಸಿದರು. ಕಾಶ್ಮೀರದ ಪುಲ್ವಾಮಾದಲ್ಲಿ ನನ್ನ ಜಿಲ್ಲೆಯ ಯೋಧ ಎಚ್.ಗುರು ಹುತಾತ್ಮರಾಗಿ ಹನ್ನೊಂದನೇ ದಿನದ ಪುಣ್ಯತಿಥಿ ಕಾರ್ಯದಂದೇ ಸೇನೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿ ಸೆದೆಬಡಿದಿರುವ ಕೆಲಸ ಉತ್ತಮವಾದುದು ಎಂದು ಸೇನೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.