Advertisement
ಶುಕ್ರವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ, ಸರ್ಕಾರದ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ದುಡಿಯುವವರು ಯಾರೋ, ದುಡಿಯದೇ ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು ಬಸವಾದಿ ಶರಣರು ಹೋರಾಟ ಮಾಡಿದರು ಎಂದರು.
Related Articles
Advertisement
ಒಂದೇ ದಿನ 227 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಅಪ್ಪಾಜಿ ನಾಡಗೌಡ ಅತ್ಯಂತ ಹಿರಿಯ ಸಭ್ಯ ರಾಜಕಾರಣಿ ಶಾಸಕರಾಗಿದ್ದಾರೆ. ಅವರಿಗೆ ಸಚಿವರಾಗುವ ಅರ್ಹತೆ, ಅನುಭವ ಎರಡೂ ಇದೆ ಕಾರಣದಿಂದ ಸಾಧ್ಯವಾಗಿಲ್ಲ. ಆದರೂ ಮುದ್ದೇಬಿಹಾಳ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಅಪ್ಪಾಜಿ ನಾಡಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.
ಕಳೆದ ವರ್ಷದ ಮಾರ್ಚ್ 20 ರಂದು ನಾನು ಮುದ್ದೇಬಿಹಾಳ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವತ್ತು ನಾನು ಮುದ್ದೇ ಬಿಹಾಳದಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ನಾನು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆದಿದ್ಸೇವೆ. ಈಗಲೂ ಅಷ್ಟೆ ಎಂದರು.
ಬಸವಾದಿ ಶರಣರು ನುಡಿದಂತೆ ನಡೆದರು. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಇದೇ ವೇಳೆ ವೇದಿಕೆ ಮೇಲಿದ್ದ ವಿವಿಧ ಮಠಾಧೀಶರು ರಾಜ್ಯ ಸರ್ಕಾರ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ, ಸನ್ಮಾನಿಸಿದರು
ಮುದ್ದೇಬಿಹಾಳ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕಾ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಜಿಲ್ಲೆಯ ಶಾಸಕರಾದ ಪ್ರಕಾಶ ರಾಥೋಡ, ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಬಸವನಗೌಡ ಪಾಟೀಲ್, ಸುನಿಲಗೌಡ ಪಾಟೀಲ, ಪಿ.ಹೆಚ್.ಪೂಜಾರ, ವಿಟ್ಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.