Advertisement

ಸಿಎಂ ಎಚ್‌ಡಿಕೆ ಎಚ್ಚರಿಕೆ ಕಾರ್ಯಾಂಗ ಚರ್ಚೆ

06:00 AM Sep 22, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸುವ ಮೂಲಕ ತಮ್ಮ ಇನ್ನೊಂದು ಮುಖ ತೋರಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವುದು ಅಧಿಕಾರಶಾಹಿ ಹಂತದಲ್ಲಿ ಅತೃಪ್ತಿ ಮೂಡಿಸಿದೆ.

Advertisement

ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಕಾರ್ಯಾಂಗದ ಜವಾಬ್ದಾರಿಯಾಗಿದೆ. ಅದು ಎಲ್ಲ ಸಂದರ್ಭದಲ್ಲೂ ಕಾರ್ಯ ನಿರ್ವಹಿಸುತ್ತಿರುತ್ತದೆ ಎಂಬುದು ಐಎಎಸ್‌ ಅಧಿಕಾರಿಗಳ ವಲಯದ ಅಭಿಪ್ರಾಯ. ಪ್ರಭಾವ, ಶಿಫಾರಸು ಆಧಾರಿತ ವರ್ಗಾವಣೆ ಕೈಬಿಟ್ಟು ಅಧಿಕಾರಿಗಳ ಕಾರ್ಯಕ್ಷಮತೆ ಪರಿಗಣಿಸುವಂತಾದರೆ ಬಹಳಷ್ಟು ಸಮಸ್ಯೆ ನಿವಾರಣೆಯಾಗಲಿದೆ ಎಂಬುದು ಕೆಎಎಸ್‌ ಅಧಿಕಾರಿ ವಲಯದ ನಿಲುವು. ಒಟ್ಟಾರೆ ಸಿಎಂ ಹೇಳಿಕೆ ಶಾಸಕಾಂಗ- ಕಾರ್ಯಾಂಗದ ನಡುವಿನ ಸಮನ್ವಯದ ಕೊರತೆಯನ್ನು ಬಹಿರಂಗಪಡಿಸಿದಂತಿದೆ.

ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ 100ನೇ ಸಾಮಾನ್ಯ ಪರಿಷತ್‌ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸರ್ಕಾರ ಅಸ್ಥಿರವಾಗಿದೆ ಎಂಬ ಭಾವನೆಯಲ್ಲಿ ಕೆಲ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ ಆಟವಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೂ ಚರ್ಚಿಸಿದ್ದೇನೆ. ಅವರಿಗೆ ವಾರದ ಗಡುವು ನೀಡುತ್ತಿದ್ದು, ಬದಲಾಗದಿದ್ದರೆ ಚಾಟಿ ಬೀಸುತ್ತೇನೆ. ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಕಳೆದ ಬುಧವಾರ ಎಚ್ಚರಿಕೆ ನೀಡಿದ್ದರು. ಇದು ಅಧಿಕಾರಿಶಾಹಿ ವಲಯದಲ್ಲಿ ಪರ- ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಚುನಾಯಿತ ಸರ್ಕಾರವಿರಲಿ, ರಾಷ್ಟ್ರಪತಿಗಳ ಆಡಳಿತವಿರಲಿ ಕಾರ್ಯಾಂಗ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಅದು ಕಡ್ಡಾಯವಾಗಿದ್ದು, ಅದರಲ್ಲಿ ವಿನಾಯ್ತಿ ಇಲ್ಲವೇ ರಾಜಿಯ ಪ್ರಶ್ನೆಯೇ ಇರುವುದಿಲ್ಲ. ಸರ್ಕಾರಿ ಯಂತ್ರ ಒಂದು ದಿನ ಸ್ಥಗಿತವಾದರೂ ಅದರ ಪರಿಣಾಮ ಗಂಭೀರವಾಗಿರುತ್ತದೆ. ಅಪರೂಪದ ಸಂದರ್ಭ ಇಲ್ಲವೇ ಕೆಲ ವೈಯಕ್ತಿಕ ಕಾರಣಗಳಿಗೆ ಬೆರಳೆಣಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರಬಹುದೇನೋ. ಬಹುಪಾಲು ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸಾಮೂಹಿಕವಾಗಿ ಅಧಿಕಾರಿಗಳು ಒಟ್ಟಾಗಿ ಅಸಹಕಾರ ತೋರುವ ಸಂದರ್ಭ ತೀರಾ ಅಪರೂಪ ಎನ್ನುತ್ತದೆ ಐಎಎಸ್‌ ಅಧಿಕಾರಿ ವಲಯ.

ಆಯಕಟ್ಟಿನ ಹುದ್ದೆಯಲ್ಲಿ ಪ್ರಭಾವಿಗಳು 
ಸರ್ಕಾರ ಬದಲಾಗುತ್ತಿದ್ದಂತೆ ಆಯಕಟ್ಟಿನ ಹುದ್ದೆಯಲ್ಲಿನ ಅಧಿಕಾರಿಗಳು ತಕ್ಷಣ ಬದಲಾಗುತ್ತಾರೆ. ಇದರಲ್ಲಿ ಬಹುಪಾಲು ಅಧಿಕಾರಿಗಳು ಶಾಸಕರು, ಸಚಿವರು, ಪಕ್ಷದ ಮುಖಂಡರ ಶಿಫಾರಸು ಆಧಾರದಲ್ಲೇ ವರ್ಗಾವಣೆಯಾಗಿರುತ್ತಾರೆ. ಬಹುತೇಕ ಆಯಕಟ್ಟಿನ ಹುದ್ದೆ, ಸ್ಥಾನಗಳಲ್ಲಿ ಪ್ರಭಾವಿ ಅಧಿಕಾರಿಗಳೇ ಪ್ರತಿಷ್ಠಾಪನೆಯಾಗಿದ್ದಾರೆ. ಹೀಗಿರುವಾಗ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನೂ ಅಧಿಕಾರಿಗಳ ಒಂದು ವರ್ಗ ಎತ್ತಿದೆ.

Advertisement

ಬರಪೀಡಿತ ಜಿಲ್ಲೆಗಳಲ್ಲಿ ಅಗತ್ಯ ಕಾರ್ಯಕ್ರಮಗಳ ಅನುಷ್ಠಾನ, ಪ್ರವಾಹಪೀಡಿತ ಕೊಡಗು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ, ನಿರೀಕ್ಷೆ ಮೀರಿ ತೆರಿಗೆ ಸಂಗ್ರಹವಾಗುತ್ತಿದೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಹೀಗಿರುವಾಗ ಅಸಹಕಾರ ತೋರುತ್ತಿರುವ ಅಧಿಕಾರಿಗಳ ವರ್ಗವಾದರೂ ಯಾವುದು. ಈ ರೀತಿಯ ಮಾತುಗಳು ಕಾರ್ಯಾಂಗದ ಬಗ್ಗೆ ಸಾರ್ವಜನಿಕರಲ್ಲಿನ ವಿಶ್ವಾಸವನ್ನು ಕಡಿಮೆ ಮಾಡಲಿದ್ದು, ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಉನ್ನತ ಅಧಿಕಾರಿಗಳ ವರ್ಗ ಹೇಳುತ್ತದೆ. ಜತೆಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂಬ ಒತ್ತಾಯವನ್ನು ಮಾಡುತ್ತಿದೆ. ಒಟ್ಟಾರೆ ಮುಖ್ಯಮಂತ್ರಿಗಳ ಹೇಳಿಕೆಯು ಶಾಸಕಾಂಗ- ಕಾರ್ಯಾಂಗದ ಹೊಂದಾಣಿಕೆ ಬಗ್ಗೆಯೇ ಜಿಜ್ಞಾಸೆ ಮೂಡಿಸುವಂತಿದೆ.

ಮುಖ್ಯಮಂತ್ರಿಗಳು ಮುಂದಿನ ವಾರ (ಸೆ. 28) ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ. ಆಯವ್ಯಯ ಘೋಷಣೆಗಳ ಅನುಷ್ಠಾನ, ಪ್ರಗತಿ ಹಾಗೂ ಆರ್ಥಿಕ ವೆಚ್ಚಗಳ ಪ್ರಗತಿ ಬಗ್ಗೆ ಸಮೀಕ್ಷೆಯನ್ನು ಖುದ್ದಾಗಿ ಮುಖ್ಯಮಂತ್ರಿಗಳೇ ನಡೆಸಲಿದ್ದಾರೆ.
– ಟಿ.ಎಂ. ವಿಜಯ ಭಾಸ್ಕರ್‌, ಮುಖ್ಯ ಕಾರ್ಯದರ್ಶಿ

ಅಧಿಕಾರಿಗಳಾದವರು ಎಲ್ಲ ಸಂದರ್ಭದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ತಮ್ಮ ಕರ್ತವ್ಯ ನಿರ್ವಹಿಸುವುದು ಅವರ ಜವಾಬ್ದಾರಿಯೂ ಹೌದು. ಹಾಗಾಗಿ ಕರ್ತವ್ಯ ನಿರ್ವಹಿಸಲೇ ಬೇಕು. ಕೆಲ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇರಬಹುದು. ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದವರ ವಿರುದ್ಧ ಕ್ರಮ ಜರುಗಿಸುವುದು ಸೂಕ್ತ.
– ಪಿ.ರವಿಕುಮಾರ್‌, ಐಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷರು

ಶಾಸಕರು, ಸಚಿವರ ಶಿಫಾರಸು ಆಧರಿಸಿ ಅಧಿಕಾರಿಗಳ ವರ್ಗಾವಣೆ ಮಾಡುವುದು ಮೊದಲು ನಿಲ್ಲಬೇಕು. ಕಾರ್ಯಕ್ಷಮತೆ ಆಧರಿಸಿ ಸೂಕ್ತ ಹುದ್ದೆಗೆ ಅಧಿಕಾರಿಗಳನ್ನು ನಿಯೋಜಿಸಬೇಕು. ಆನಂತರವೂ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಬಗ್ಗೆ ಶಾಸಕರು, ಸಚಿವರು ಗಮನಕ್ಕೆ ತಂದರೆ ಅವರನ್ನು ವರ್ಗಾವಣೆ ಮಾಡಬೇಕು. ಈ ರೀತಿಯ ವ್ಯವಸ್ಥೆ ತಂದರೆ ಆಡಳಿತ ಯಂತ್ರ ಸುಗಮವಾಗಿ ಸಾಗಲಿದೆ.
– ಕೆ. ಮಥಾಯಿ, ಕೆಎಎಸ್‌ ಅಧಿಕಾರಿಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next