ಬೆಂಗಳೂರು: ಮುಖ್ಯಮಂತ್ರಿ ವಸತಿ ಯೋಜನೆಯಡಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 60 ಸಾವಿರ ಮನೆ ನಿರ್ಮಿಸುವ ಯೋಜನೆಗೆ ಕೊನೆಗೂ ಚಾಲನೆ ಸಿಗುತ್ತಿದೆ. ವಿಶೇಷವೆಂದರೆ, ಹಿಂದಿನ ಸರ್ಕಾರ ಘೋಷಿಸಿದ್ದ ಯೋಜನೆಗೆ ಆ. 12ರಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ಪ್ರಯತ್ನಿಸಲಾಗುತ್ತಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳ ವಸತಿ ಯೋಜನೆಗೆ ಈಗಾಗಲೇ ಕ್ರಮ ಕೈಗೊಂಡು ಫಲಾನುಭವಿಗಳ ಆಯ್ಕೆಯಾಗಿದೆ.
ಕಾಮಗಾರಿ ಗುತ್ತಿಗೆಯನ್ನೂ ಖಾಸಗಿಯವರಿಗೆ ವಹಿಸಲಾಗಿದೆ. ಇದೀಗ ರಾಜ್ಯಾದ್ಯಂತ ಏಕಕಾಲದಲ್ಲಿ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಆ. 12ರಂದು ಹುಬ್ಬಳ್ಳಿಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಪ್ರತಿಪಕ್ಷ ನಾಯಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು. ಸಿಎಂ ವಸತಿ ಯೋಜನಯೆ ಒಟ್ಟು 60 ಸಾವಿರ ಮನೆಗಳ ಪೈಕಿ ಉತ್ತರ ಕರ್ನಾಟಕ ಭಾಗಕ್ಕೆ 22 ಸಾವಿರ ಮನೆಗಳು ಸಿಗಲಿವೆ. ಒಂದು ಬೆಡ್‌ರೂಂ ಮನೆಗೆ ಸಬ್ಸಿಡಿ ಸಿಗಲಿದ್ದು, ಡಬಲ್ ಬೆಡ್‌ರೂಂ ಮನೆಗೆ ಯಾವುದೇ ಸಬ್ಸಿಡಿ ಇರುವುದಿಲ್ಲ. ಸಂಪೂರ್ಣ ಮೊತ್ತ ಫಲಾನುಭವಿ ಭರಿಸಬೇಕಾಗುತ್ತದೆ ಎಂದರು.
ಬೆಂಗಳೂರು ನಗರದಲ್ಲಿ 1 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಒಂದು ಸಾವಿರ ಎಕರೆ ಭೂಮಿ
ಗುರುತಿಸಲಾಗಿದೆ. ಆದರೆ, ಅರ್ಜಿ ಆಹ್ವಾನಿಸಿದಾಗ ಕೇವಲ 45 ಸಾವಿರ ಅರ್ಜಿಗಳು ಮಾತ್ರ ಬಂದಿವೆ. ಅರ್ಜಿ ಸಲ್ಲಿಸಿದವರು ಇರುವ ಪ್ರದೇಶ ಗುರುತಿಸಿ ಆ ಭಾಗದಲ್ಲಿ ನಿರ್ಮಾಣ ಕಾರ್ಯ ಆರಂಭಿಸಿ ಉಳಿದ 55 ಸಾವಿರ ಮನೆಗಳಿಗೆ ಮತ್ತೂಮ್ಮೆ ಅರ್ಜಿ ಅಹ್ವಾನಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.