Advertisement

ಸರಕಾರ ಉರುಳಿಸಲು ಸಾಧ್ಯವಿಲ್ಲ: ಸಿಎಂ ಕೂಲ್‌, ಕೂಲ್‌ 

12:55 AM Jan 20, 2019 | |

ಮೈಸೂರು: ನಾನು ಮುಖ್ಯಮಂತ್ರಿಯಾದ ದಿನದಿಂದಲೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು, ಪರ್ಯಾಯ ಸರಕಾರ ರಚಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅದರಲ್ಲಿ ಅವರು ಸಫ‌ಲರಾಗುವುದಿಲ್ಲ  ಎಂದು ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

Advertisement

ಪುತ್ರ ನಿಖೀಲ್‌ ಕುಮಾರಸ್ವಾಮಿ ಅಭಿನಯಿಸಿರುವ ಸೀತಾರಾಮ ಕಲ್ಯಾಣ ಚಲನಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದ ಹಿನ್ನೆಲೆಯಲ್ಲಿ ಕೋಲ್ಕತಾದಿಂದ ಮೈಸೂರಿಗೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಂವಿಧಾನಿಕ ವ್ಯವಸ್ಥೆಯಲ್ಲಿ ಅಗತ್ಯವಾದ ಸಂಖ್ಯೆ ಇರುವಾಗ ನನಗೆ ಹೆದರಿಕೆ ಇಲ್ಲ. ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನಕೊಟ್ಟಿದ್ದೇನೆ. ಬಿಜೆಪಿಯವರು ನಮ್ಮ ಶಾಸಕರನ್ನು ಹೈಜಾಕ್‌ ಮಾಡುವ ಪ್ರಯತ್ನ ನಡೆದಿದೆ ಎಂದು ಆಪಾದನೆ ಮಾಡುತ್ತಿದ್ದಾರೆ. ಆದರೆ, ನಾವು ಆ ರೀತಿಯ ಕಸರತ್ತು ಮಾಡುವುದಿಲ್ಲ  ಎಂದರು.

ರೆಸಾರ್ಟ್‌ ರಾಜಕಾರಣ ತಪ್ಪು. ಆದರೆ, ಬಿಜೆಪಿಯ ಹಲವು ರೀತಿಯ ದಾರಿ ತಪ್ಪಿಸುವ  ತಾವರಣದಿಂದ ತನ್ನ ಶಾಸಕರನ್ನು ಒಟ್ಟಾಗಿಟ್ಟು, ಬಿಜೆಪಿಯ ಹುನ್ನಾರ ತಪ್ಪಿಸಲು ಕಾಂಗ್ರೆಸ್‌ ತನ್ನ ಶಾಸಕರನ್ನು ಹಿಡಿದಿಟ್ಟಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಾವೇನೂ ಬಿಜೆಪಿಯವರಿಗೆ ಪ್ರತಿತಂತ್ರ ಮಾಡುತ್ತಿಲ್ಲ. ಜೆಡಿಎಸ್‌ ಶಾಸಕರಿಗೂ ಆಮಿಷವೊಡ್ಡಿ, ಒತ್ತಡ ಹಾಕಿದ್ದಾರೆ. ಆದರೂ ನಾವು ನಮ್ಮ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲ್ಲ. ದೋಸ್ತಿ ಸರಕಾರದಲ್ಲಿ ಬಿ.ಎಸ್‌.ಯಡಿಯೂರಪ್ಪ ನಡೆದುಕೊಂಡಂತೆ ಈ ವರೆಗೆ ಕಾಂಗ್ರೆಸ್‌ನವರು ನಡೆದುಕೊಂಡಿಲ್ಲ. ಯಡಿಯೂರಪ್ಪ ಅವರಂತೆ ನಾವು ನಡೆದುಕೊಳ್ಳಬೇಕು ಅಂತಿದ್ದರೆ ಆಗ ನಾನು ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸಿಎಂ ಕೂಲ್‌, ಕೂಲ್‌ 
ಬೆಂಗಳೂರು: “ಆಪರೇಷನ್‌ ಕಮಲ’ದ ಬಗ್ಗೆ ಕಾಂಗ್ರೆಸ್‌ ತಲೆ ಕೆಡಿಸಿಕೊಂಡು ಶಾಸಕರನ್ನು ರೆಸಾರ್ಟ್‌ನಲ್ಲಿ ಗುಡ್ಡೆ ಹಾಕಿಕೊಂಡು ಯಾರೂ ಬಿಜೆಪಿಯತ್ತ ಹೋಗದಂತೆ ಕಾವಲು ಕಾಯುತ್ತಿದ್ದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಶನಿವಾರ ನಿರ್ಲಿಪ್ತವಾಗಿದ್ದರು. ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡು ಮೈಸೂರಿಗೆ ಬಂದು ತಮ್ಮ ಪುತ್ರನ ಸಿನಿಮಾ ಟ್ರೀಸರ್‌ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಜೆಡಿಎಸ್‌ ಸಚಿವರು-ಶಾಸಕರನ್ನು ಕರೆಸಿಕೊಂಡು ಹೋಟೆಲ್‌ನಲ್ಲಿ ಸಭೆ ಮಾಡಿದರು. ಜೆಡಿಎಸ್‌ನವರು ಯಾರೂ ಬಿಜೆಪಿ ಸಂಪರ್ಕದಲ್ಲಿರದ ಕಾರಣ ಹಾಗೂ ಅತೃಪ್ತ ಶಾಸಕರೂ ಕುಮಾರಸ್ವಾಮಿ ಜತೆ ಸಂಪರ್ಕದಲ್ಲಿರುವುದರಿಂದ ಕುಮಾರಸ್ವಾಮಿ ನಿರಾಳವಾಗಿದ್ದಾರೆಂದು ಹೇಳಲಾಗಿದೆ.

Advertisement

ಶುಕ್ರವಾರ ರಾತ್ರಿ ಶಾಸಕರನ್ನು ಭೇಟಿ ಮಾಡಲು ರೆಸಾರ್ಟ್‌ಗೆ ಬರಲಿದ್ದಾರೆಂದು ಹೇಳಲಾಗಿತ್ತಾದರೂ ಅವರು ನೇರವಾಗಿ ಕೊಲ್ಕತ್ತಾಗೆ ತೆರಳಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರಿಂದ ರಾಜ್ಯ
ರಾಜಕೀಯ ಚಟುವಟಿಕೆಗಳ ಬಗ್ಗೆ ಅಲ್ಲಿಯೇ ಮಹತ್ವದ ಸಮಾಲೋಚನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next