ಬೆಂಗಳೂರು: ಸೋಮವಾರ ಕಲಾಪದಲ್ಲಿ ವಿಶ್ವಾಸಮತ ಯಾಚಿಸುತ್ತೇವೆ ಎಂದು ಭರವಸೆ ನೀಡಿದ್ದ ಸಿಎಂ ಕುಮಾರಸ್ವಾಮಿ ಇದೀಗ ಸ್ಪೀಕರ್ ರಮೇಶ್ ಕುಮಾರ್ ಜೊತೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿ ವಿಶ್ವಾಸಮತ ಯಾಚನೆಯ ಚರ್ಚೆಗೆ ಇನ್ನೂ 2 ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಂದೇ ವಿಶ್ವಾಸಮತ ಯಾಚಿಸುವಂತೆ ಸೂಚನೆ ನೀಡಬೇಕೆಂದು ಇಬ್ಬರು ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನಾಳೆ ಪಕ್ಷೇತರ ಶಾಸಕರ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀ ಪೀಠ ತಿಳಿಸಿದೆ.
ಸಿಎಂ ಕುಮಾರಸ್ವಾಮಿ, ಕೃಷ್ಣಭೈರೇಗೌಡ, ಎಚ್.ಡಿ.ರೇವಣ್ಣ, ಪ್ರಿಯಾಂಕ ಖರ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ವಿಶ್ವಾಸಮತ ಯಾಚಿಸಲು ಇನ್ನೂ ಎರಡು ದಿನಗಳ ಕಾಲಾವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ ಸಿಎಂ ನಿಯೋಗದ ಮನವಿಗೆ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಸದನದಲ್ಲೇ ನಾನು ಸೋಮವಾರ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ್ದೆ. ಇನ್ನು ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ಬಿಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ, ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.