Advertisement
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಅಭಿನಂದನೆಯನ್ನು ನಯವಾಗಿ ತಿರಸ್ಕರಿಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ನಿಮಗೆ (ಕಾರ್ಯಕರ್ತರಿಗೆ) ಸಂತೋಷವಾಗಿರಬಹುದು. ಆದರೆ, ನಾನು ಸಂತೋಷದಿಂದ ಇಲ್ಲ ಎನ್ನುತ್ತಲೇ ಕೆಲಹೊತ್ತು ಗದ್ಗದಿತರಾದರು.
Related Articles
ನಾನು ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದು ಅಧಿಕಾರದಿಂದ ಮೆರೆಯಲಿಕ್ಕಲ್ಲ. ಈ ನಾಡಿನ ರೈತರ, ಬಡವರ, ಕೂಲಿಕಾರರ ಸಮಸ್ಯೆಗಳನ್ನು ಜಾತಿ ಮತ್ತು ಪಕ್ಷ ಭೇದ ಮರೆತು ಬಹೆಗರಿಸಬೇಕೆಂದು. ಜನಪರ ಕೆಲಸಗಳನ್ನು ಮಾಡಬೇಕೆನ್ನುವ ಆಶಯ ನನ್ನಲ್ಲಿದ್ದವು. ಆದರೆ, ನನ್ನ ಆಶಯಗಳನ್ನು ಅನುಷ್ಠಾನಕ್ಕೆ ತರಲು ನಾಡಿನ ಜನತೆ ನನ್ನಮೇಲೆ ವಿಶ್ವಾಸವಿಡುತ್ತಿಲ್ಲ. ನಾನು ಹೋದ ಕಡೆ ಜನ ಸೇರ್ತಾರೆ, ಸಂತೋಷ ಪಡ್ತಾರೆ. ದೌರ್ಭಾಗ್ಯವೆಂದರೆ, ನನ್ನ ಪಕ್ಷಕ್ಕೆ ಓಟು ಹಾಕುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಸಿಎಂ ಕುರ್ಚಿ ಹೋಗುತ್ತದೆ ಎಂದು ನಾನು ಕಣ್ಣೀರು ಹಾಕಿಲ್ಲ. ಜನ ವಿಶ್ವಾಸವಿಡುತ್ತಿಲ್ಲವಲ್ಲ ಎಂಬ ನೋವಿನಿಂದ ಕಣ್ಣೀರು ಹಾಕಿದ್ದೇನೆ. ನಾನು ಈ ನಾಡಿನ ಆರೂವರೆ ಕೋಟಿ ಜನತೆಯ ಮುಖ್ಯಮಂತ್ರಿ ಅಂದುಕೊಂಡಿದ್ದೇನೆ. ನಿಮಗೆಲ್ಲ ಅಣ್ಣನೋ, ತಮ್ಮನೋ ಸಿಎಂ ಆಗಿದ್ದಾನೆ ಎಂಬ ಸಂತೋಷ ಇರಬಹುದು. ಆದರೆ, ನಾನು ಸಂತೋಷದಿಂದಿಲ್ಲ. ವಿಷ ನುಂಗಿ ನಿಮಗೆ ಅಮೃತ ಕೊಡುತ್ತೇನೆ ಎಂದರು.
ಅನ್ನ ಕೊಡ್ತಿರೋ, ವಿಷ ಕೊಡ್ತಿರೋ:ನನ್ನ ರೈತರ ಹಿತ ಕಾಪಾಡಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದಿಲ್ಲ. ಬಿಜೆಪಿಯವರು ಸಂಕುಚಿತ ಮನೋಭಾವ ಬಿಡಬೇಕು. ಸಾಲಮನ್ನಾ ಬಗ್ಗೆ ನಮ್ಮ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹಣ ಹೇಗೆ ಹೊಂದಿಸುತ್ತಾರೆ ಎಂದು ಅವರು ಯೋಚಿಸಿರಲಿಲ್ಲ. ದೇಶದ ಯಾವ ರಾಜ್ಯದಲ್ಲೂ ಚಾಲ್ತಿ ಸಾಲ ಮನ್ನಾದಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿಲ್ಲ. ರೈತರ 1 ಲಕ್ಷ ರೂ.ವರೆಗಿನ ಚಾಲ್ತಿ ಸಾಲವನ್ನೂ ಮನ್ನಾ ಮಾಡಿದ್ದೇನೆ. ಇದಕ್ಕೂ ಸಮಾಧಾನ ಇಲ್ಲದಿದ್ದರೆ ನನಗೆ ಅನ್ನ ಕೊಡುತ್ತೀರೋ, ವಿಷ ಕೊಡುತ್ತೀರೊ ಎಂದು ರೈತರನ್ನು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ, ಸಿಎಂ ಕುಮಾರಸ್ವಾಮಿ ಕರ್ಣ ಅಲ್ಲ, ಧರ್ಮರಾಯ ಎಂದು ಬಣ್ಣಿಸಿದರು. ಕಾಂಗ್ರೆಸ್ ಕಡೆಗಣಿಸುವಂತಿಲ್ಲ: ದೇವೇಗೌಡ
ಕುಮಾರಸ್ವಾಮಿ ಮುನ್ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರ. ನಮಗೆ ಬೆಂಬಲಿಸಿರುವ ಕಾಂಗ್ರೆಸ್ ಪಕ್ಷವನ್ನೂ ಕಡೆಗಣಿಸುವಂತಿಲ್ಲ. ಮತ್ತೂಂದು ಕಡೆ 104 ಸ್ಥಾನ ಹೊಂದಿರುವ ಬಲಿಷ್ಠ ವಿರೋಧಪಕ್ಷವನ್ನೂ ಎದುರಿಸಬೇಕಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ತೊಳಲಾಟ ನಾನು ನೋಡಿದ್ದೇನೆ. ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ. ಆದರೆ, ಎಲ್ಲವೂ ಸರಿ ಹೋಗುತ್ತದೆ. ಎದೆಗುಂದಬೇಕಿಲ್ಲ, ಧೈರ್ಯದಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಧೈರ್ಯ ತುಂಬಿದರು. ಏಳು ಕೆ.ಜಿ ಅಕ್ಕಿಗೆ ಹಣ ಎಲ್ಲಿಂದ ತರಲಿ
ಅನ್ನಭಾಗ್ಯ ಯೋಜನಯಡಿ 7 ಕೆ.ಜಿ ಅಕ್ಕಿ ಕೊಡಲು ನನಗೇನು ಅಭ್ಯಂತರವಿಲ್ಲ. ಈಗ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದ್ದು, ಹೆಚ್ಚುವರಿ 2ಕೆ.ಜಿ. ಅಕ್ಕಿ ಕೊಡಬೇಕು. ಆದರೆ, ಈ 2 ಕೆ.ಜಿ ಅಕ್ಕಿ ನೀಡಬೇಕಾದರೆ ವರ್ಷಕ್ಕೆ 2,500 ಕೋಟಿ ರೂ. ಬೇಕು. ಇಷ್ಟೊಂದು ಹಣ ಎಲ್ಲಿಂದ ಹೊಂದಿಸಲಿ. ಸಿದ್ದರಾಮಯ್ಯ ಸರ್ಕಾರದಲ್ಲಿ 3 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈಗ 2 ಕೆ.ಜಿ ಅಕ್ಕಿ ಹೆಚ್ಚಿಗೆ ಕೊಟ್ಟರೆ, 5 ಸಾವಿರ ಕೋಟಿ ರೂ. ಬೇಕಾಗುತ್ತದೆ. ಈ ಹೆಚ್ಚುವರಿ ಹಣ ಎಲ್ಲಿಂದ ತಂದು ಜೋಡಿಸಲಿ. ತೆರಿಗೆ ಹಾಕಿದ್ರೆ ಬೇಡ ಎಂದು ನೀವೇ ಹೇಳ್ತಿರಾ ಎಂದು ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡರು.