ರಾಯಚೂರು: ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮ ವಾಸ್ತವ್ಯಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನೆಯ ಬಿಸಿ ಎದುರಿಸಿದ್ದು, ಅಧಿಕಾರಿಗಳು ಮತ್ತು ಸಚಿವರ ಮೇಲೆ ಕೆಂಡಾಮಂಡಲರಾಗಿದ್ದಾರೆ.
ವೈಟಿಪಿಎಸ್ ಕಾರ್ಮಿಕರು ಮಾರ್ಗ ಮಧ್ಯೆ ಸಿಎಂ ಪ್ರಯಾಣಿಸುತ್ತಿದ್ದ ಬಸ್ ತಡೆದು ಘೇರಾವ್ ಹಾಕಿದ್ದಾರೆ. ಪೊಲೀಸರು ತಡೆಯುವ ಯತ್ನ ಮಾಡಿದರೂ ಪ್ರತಿಭಟನಾ ನಿರತರು ಬಸ್ ತಡೆದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಕೆಂಡಾಮಂಡಲವಾದ ಸಿಎಂ, ಕಾರ್ಮಿಕರನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡರು. ನೀವು ನರೇಂದ್ರ ಮೋದಿಗೆ ವೋಟ್ ಹಾಕ್ತೀರಿ, ಸಮಸ್ಯೆ ಬಗೆ ಹರಿಸಲು ನಮ್ ಹತ್ರ ಬರ್ತೀರಾ , ನಿಮಗೆಲ್ಲಾ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜ್ ಮಾಡಿಸ್ಬೇಕಾ ಎಂದು ಕಿಡಿ ಕಾರಿದರು.
ಆಕ್ರೋಶಿತರಾಗಿ ಬಸ್‌ನಿಂದ ಕೆಳಗಿಳಿಯಲು ಮುಂದಾದಾಗ ಸಿಎಂ ಜೊತೆಯಲ್ಲಿದ್ದ ಸಚಿವ ವೆಂಕಟರಾವ್ ಸಚಿವ ನಾಡಗೌಡ ಅವರು ತಡೆದರು. ಅಣ್ಣಾ..ನಾನು ಇಳಿಯುತ್ತೇನೆ ನೀವು ಕುಳಿತುಕೊಳ್ಳಿ ಎಂದು ಸಮಾಧಾನಪಡಿಸಿದರು. ನಾಡಗೌಡ ಅವರು ರಾಯಚೂರು ಎಸ್‌ಪಿ ಮೇಲೆ ಗರಂ ಆದರು.
ಸ್ಥಳದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿ, ಪ್ರತಿಭಟನಾ ನಿರತರನ್ನು ರಸ್ತೆಯಿಂದ ಬದಿಗೆ ಸರಿಸಲು ಪೊಲೀಸ್ ಸಿಬಂದಿಗಳು ಹರಸಾಹಸ ಪಡಬೇಕಾಯಿತು.
ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.