ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ತಮಗೇ ಸಿಎಂ ಸ್ಥಾನ ಬೇಕೆಂದು ಹಠಕ್ಕೆ ಬಿದ್ದಿರುವುದರಿಂದ ವಿಷಯ ಮತ್ತಷ್ಟು ಜಟಿಲಗೊಂಡಿದೆ. ಇಬ್ಬರೂ ಯಾವುದೇ ರಾಜಿಗೆ ಒಪ್ಪದ ಕಾರಣ ಜಿದ್ದಾಜಿದ್ದಿ ಮುಂದುವರಿದಿದೆ.
ಈ ಮಧ್ಯೆ ತನಗೆ ಸಿಎಂ ಸ್ಥಾನ ಕೊಡದಿದ್ದರೆ ಪರವಾಗಿಲ್ಲ, ಯಾವುದೇ ಸ್ಥಾನಮಾನ ಬೇಡ. ನಿಮಗಾಗಿ ನಾನು ಸಿಎಂ ಹುದ್ದೆ ತ್ಯಾಗ ಮಾಡಲು ಸಿದ್ಧನಿದ್ದೇನೆ, ನೀವೇ ಸಿಎಂ ಆಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳುವ ಮೂಲಕ ಡಿಕೆಶಿ ಹೊಸ ದಾಳ ಉರುಳಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು 3 ದಿನಗಳು ಕಳೆದರೂ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಕಾಂಗ್ರೆಸ್ ಹೈಕಮಾಂಡ್ ಒದ್ದಾಡುತ್ತಿದೆ. ಯಾವ ಕಡೆ ವಾಲಿದರೂ ಅದರಿಂದ ಆಗುವ ಪರಿಣಾಮದ ಅರಿವು ಇರುವುದರಿಂದ ಹೈಕಮಾಂಡ್ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ.
ಹೈಕಮಾಂಡ್ ಬುಲಾವ್ ಮೇರೆಗೆ ಸೋಮವಾರ ಮಧ್ಯಾಹ್ನ ದಿಲ್ಲಿ ತಲುಪಿದ ಶಿವಕುಮಾರ್ ತಮ್ಮ ಸಹೋದರ, ಸಂಸದ ಡಿ.ಕೆ. ಸುರೇಶ್ ನಿವಾಸಕ್ಕೆ ತೆರಳಿ ಅಲ್ಲಿ ಆಪ್ತ ಶಾಸಕರೊಂದಿಗೆ ಸಮಾಲೋಚಿಸಿದ ಬಳಿಕ ಖರ್ಗೆ ನಿವಾಸಕ್ಕೆ ಸಂಜೆ 5ಕ್ಕೆ ತಲುಪಿದರು. ಒಂದು ತಾಸಿಗೂ ಹೆಚ್ಚು ಕಾಲ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ ಶಿವಕುಮಾರ್, “ಪಕ್ಷ ಸಂಕಷ್ಟದಲ್ಲಿ ಇದ್ದಾಗ ಹಗಲು-ರಾತ್ರಿ ಎನ್ನದೆ ದುಡಿದು ಬಹುಮತ ತಂದುಕೊಟ್ಟಿದ್ದೇನೆ. ಎಲ್ಲ ರೀತಿಯಿಂದಲೂ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನಿದ್ದು, ನನ್ನನ್ನೇ ಮಾಡಬೇಕು’ ಎಂದು ಬೇಡಿಕೆ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಾವೆಲ್ಲ ಕಾರಣಕ್ಕೆ ಸಿಎಂ ಮಾಡಬಾರದೆಂಬ ಬಗ್ಗೆ 15 ಆರೋಪಗಳನ್ನು ಖರ್ಗೆಯವರಿಗೆ ಲಿಖೀತವಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, “ನನ್ನನ್ನು ಸಿಎಂ ಮಾಡದಿದ್ದರೆ ಸಿದ್ದರಾಮಯ್ಯ ಅವರನ್ನೂ ಮಾಡಬಾರದು, ನಿಮಗಾಗಿ ನಾನು ತ್ಯಾಗಕ್ಕೂ ಸಿದ್ಧ, ನೀವೇ ಮುಖ್ಯಮಂತ್ರಿ ಆಗಿ’ ಎಂದು ಖರ್ಗೆಯವರಿಗೆ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
Related Articles
ಖರ್ಗೆ-ರಾಹುಲ್ ಸಭೆಯಲ್ಲಿ ಏನಾಯಿತು?
ಖರ್ಗೆ ಅವರು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಮುನ್ನ ಖರ್ಗೆ ಅವರ ನಿವಾಸದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ಸಮಾಲೋಚನೆ ಕೈಗೊಂಡರು. ಸಿಎಂ ಹುದ್ದೆ ಬಿಕ್ಕಟ್ಟನ್ನು ಹೇಗೆ ಬಗೆಹರಿಸಬಹುದು ಎಂಬ ಬಗ್ಗೆ ಈ ತ್ರಿಮೂರ್ತಿಗಳು ಸುದೀರ್ಘ ಮಾತುಕತೆ ನಡೆಸಿದರು. ಇಬ್ಬರ ಮನಸ್ಸಿನಲ್ಲಿ ಏನಿದೆ, ಅವರ ಬೇಡಿಕೆಗಳು, ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳಿ ಎಂದು ರಾಹುಲ್ ಸೂಚನೆ ನೀಡಿದರೆಂದು ತಿಳಿದುಬಂದಿದೆ. ಅಧಿಕಾರ ಹಂಚಿಕೆ ಸೂತ್ರ ರೂಪಿಸಬಹುದೇ, ಅದಕ್ಕೆ ಇಬ್ಬರೂ ಒಪ್ಪುತ್ತಾರೆಯೇ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಅತ್ಯಂತ ಗಂಭೀರ ಜವಾಬ್ದಾರಿ ಇದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂಬುದನ್ನು ರಾಹುಲ್ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.
ಇಂದು ಅಂತಿಮ ಸಭೆ
ದಿಲ್ಲಿಯ ಖರ್ಗೆ ನಿವಾಸದಲ್ಲಿ ಮಂಗಳವಾರ ಇಡೀ ದಿನ ಸರಣಿ ಸಭೆಗಳು, ಬಿರುಸಿನ ರಾಜಕೀಯ ಚಟುವಟಿಕೆ ನಡೆದರೂ ಸಿಎಂ ಆಯ್ಕೆ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ -ಇಬ್ಬರ ವಾದಗಳನ್ನು ಆಲಿಸಿರುವ ಖರ್ಗೆ ಈಗ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಈ ಬಗ್ಗೆ ಅವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದ ಬಳಿಕ ಅಂತಿಮ ನಿರ್ಣಯ ಘೋಷಿಸುವ ಸಾಧ್ಯತೆಗಳಿವೆ. ಸಭೆಯಲ್ಲಿ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುಜೇìವಾಲ, ಕೆ.ಸಿ. ವೇಣುಗೋಪಾಲ್ ಭಾಗವಹಿಸಲಿದ್ಧಾರೆ. ಡಿಕೆಶಿ, ಸಿದ್ದರಾಮಯ್ಯ ಅವರಿಗೂ ಆಹ್ವಾನವಿದೆ.