ಬೆಂಗಳೂರು: ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಿಸಿದ ನಂತರ ಚುನಾವಣಾ ಕಾರ್ಯತಂತ್ರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್‌ನ ಇತರ ಮುಖಂಡರೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದರು.
ದೆಹಲಿಯಿಂದ ವಾಪಸ್ಸಾಗುತ್ತಲೇ ಪರಮೇಶ್ವರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹಾಗೂ ಇನ್ನಿತರ ಕೆಲ ನಾಯಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ, ಚುನಾವಣೆ ಎದುರಿಸುವ ಕಾರ್ಯತಂತ್ರ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಯಾವ, ಯಾವ ಕ್ಷೇತ್ರದಲ್ಲಿ ಅಸಮಾಧಾನ ಇದೆ ಮತ್ತು ಅದನ್ನು ಜಿಲ್ಲಾ ಮುಖಂಡರು ಹಾಗೂ ಉಸ್ತುವಾರಿ ಸಚಿವರ ಮೂಲಕ ಯಾವ ರೀತಿ ಸಮಾಧಾನ ಪಡಿಸಬಹುದು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿದರು.
ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಮುಖಂಡರಿಗೆ ಬಂಡಾಯ ಶಮನ ಮಾಡುವ ಹೊಣೆಗಾರಿಕೆ ನೀಡುವುದು. ತೀರಾ ಅನಿವಾರ್ಯ ಎಂದಾದರೆ ಖುದ್ದಾಗಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಅಸಮಾಧಾನಿತರ ಜತೆ ಮಾತನಾಡಿ ಮನವೊಲಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.
ಈ ಮಧ್ಯೆ, ಮುಖ್ಯಮಂತ್ರಿಯವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ತಕ್ಷಣ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಭೇಟಿ ಮಾಡಿ ಹೂಗುತ್ಛ ನೀಡಿ ತಮಗೆ ಟಿಕೆಟ್ ದೊರೆತಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿಧಾನಸಭೆ ಚುನಾವಣೆ ಗೆಲ್ಲುವ ಮಾನದಂಡ ಇಟ್ಟುಕೊಂಡು ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅಂಥವರಿಗೆ ಪಕ್ಷದ ಸಂಘಟನೆ ಹೊಣೆ ನೀಡಲಾಗುತ್ತದೆ. ವಿ.ಆರ್.ಸುದರ್ಶನ್ ಸೇರಿ ಟಿಕೆಟ್ ತಪ್ಪಿರುವ ಎಲ್ಲ ಆಕಾಂಕ್ಷಿಗಳ ಜತೆಯೂ ಮಾತನಾಡುತ್ತೇವೆ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ