Advertisement

ಸಿಎಂ ಆಯ್ಕೆ: ರಾಹುಲ್‌ಗೆ ಸವಾಲು

06:00 AM Dec 13, 2018 | Team Udayavani |

ಭೋಪಾಲ/ಹೊಸದಿಲ್ಲಿ/ಜೈಪುರ: ಮಧ್ಯಪ್ರದೇಶದಲ್ಲಿ ಗೆಲುವು ಯಾರದು ಎಂಬ ಕಾತರ ಕೊನೆಯಾಗಿದೆ. 114 ಸ್ಥಾನಗಳನ್ನುಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ ಈಗ ಎಸ್‌ಪಿ, ಬಿಎಸ್ಪಿ ಮತ್ತು ಐವರು ಪಕ್ಷೇತರರ ಬೆಂಬಲದೊಂದಿಗೆ ಸರಕಾರ ರಚನೆಗೆ ಮುಂದಾಗಿದೆ. ಆದರೆ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಾರು ಎನ್ನುವುದೇ ಕಾಂಗ್ರೆಸ್‌ ಮುಂದಿರುವ ಸವಾಲು. ಜೈಪುರ, ಭೋಪಾಲಗಳಲ್ಲಿ ನೂತನ ಶಾಸಕರ ಸಭೆ ನಡೆದಿದ್ದು, ಆಯ್ಕೆ ಹೊಣೆಯನ್ನು ಪಕ್ಷಾಧ್ಯಕ್ಷ ರಾಹುಲ್‌ಗೇ ವಹಿಸಲಾಗಿದೆ.

Advertisement

ಮಧ್ಯ ಪ್ರದೇಶ ಕಾಂಗ್ರೆಸ್‌ ನಾಯಕರಾದ‌ ಕಮಲ್‌ನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ ಸಿಂಗ್‌ ಸರಕಾರ ರಚನೆಗೆ ಅವಕಾಶ ಕೋರಿ ಬೆಂಬಲ ಪತ್ರವನ್ನು ರಾಜ್ಯಪಾಲ ಆನಂದಿ ಬೆನ್‌ ಪಟೇಲ್‌ಗೆ ಸಲ್ಲಿಸಿದ್ದಾರೆ. ಇದೇ ವೇಳೆ ಭೋಪಾಲದಲ್ಲಿ ನೂತನ ಶಾಸಕರು ಸಭೆ ಸೇರಿ ನೂತನ ನಾಯಕನ ಆಯ್ಕೆ ಅಧಿಕಾರವನ್ನು ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಕಮಲ್‌ನಾಥ್‌ ಮತ್ತು ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಹುದ್ದೆಗೆ ಸ್ಪರ್ಧಿಗಳು.

ಎಸ್‌ಪಿ-ಬಿಎಸ್ಪಿ ಬೆಂಬಲ
ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವುದಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ರಾಜಸ್ಥಾನದಲ್ಲಿಯೂ ಅದೇ ನಿಲುವು ಅನುಸರಿಸುವುದಾಗಿ ಹೇಳಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದೆ. ಇದೇ ವೇಳೆ ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕೂಡ ಕಾಂಗ್ರೆಸ್‌ ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ. 

ಚೌಹಾಣ್‌ ರಾಜೀನಾಮೆ
13 ವರ್ಷಗಳ ಕಾಲ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಶಿವರಾಜ್‌ ಸಿಂಗ್‌ ಚೌಹಾಣ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
ಪಕ್ಷದ ಸೋಲಿನ ಹೊಣೆಯನ್ನು ತಾನೇ ಹೊರುವುದಾಗಿಯೂ ಹೇಳಿದ್ದಾರೆ. ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ಗೆಲ್ಲಲು ಶ್ರಮಿಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ. 

ಇಂದು ಆಯ್ಕೆ?
ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹೊಲೊಟ್ ಮತ್ತು ಕಾಂಗ್ರೆಸ್‌ ಯುವ ನಾಯಕ ಸಚಿನ್‌ ಪೈಲಟ್‌ ಮಧ್ಯೆ ಮುಖ್ಯಮಂತ್ರಿ ಯಾಗಲು ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ನಡುವೆ ಪೈಲಟ್‌ ಮತ್ತು ಗೆಹೊಲೊಟ್ಟ್‌ರನ್ನು ಹೊಸದಿಲ್ಲಿಗೆ ಬರುವಂತೆ ರಾಹುಲ್‌ ಆಹ್ವಾನಿಸಿದ್ದಾರೆ. 

Advertisement

ಕಾಂಗ್ರೆಸ್‌ ಮುಖಂಡ ಪರ್ಸಾದಿ ಲಾಲ್‌ ಮೀನಾ ನೀಡಿದ ಮಾಹಿತಿ ಪ್ರಕಾರ ರಾಹುಲ್‌ ಗಾಂಧಿ ಶುಕ್ರವಾರ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಇದೇ ವೇಳೆ ರಾಜಸ್ಥಾನದಲ್ಲಿನ ಕಾಂಗ್ರೆಸ್‌ ನಾಯಕರ ನಿಯೋಗ ಬುಧವಾರ ಸಂಜೆ  ಜೈಪುರದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆ ಹಕ್ಕು ಮಂಡಿಸಿದೆ.

ಐದು ರಾಜ್ಯಗಳ ಫ‌ಲಿತಾಂಶ ರಾಹುಲ್‌ ನಾಯಕತ್ವಕ್ಕೆ ಉತ್ತರ ನೀಡಿದೆ. ಮುಂದಿನ ಲೋಕಸಭೆ ಚುನಾವಣೆ ಬಳಿಕ ಅವರು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ. ಜತೆಗೆ ಪ್ರಧಾನಿ ಮೋದಿಯವರಿಗಿಂತ ಉತ್ತಮ ಎಂಬ ಸಂದೇಶವನ್ನೂ ರವಾನಿಸಲಿದ್ದಾರೆ.
– ಎಂ. ವೀರಪ್ಪ ಮೊಲಿ, ಮಾಜಿ ಮುಖ್ಯಮಂತ್ರಿ

ಬಿಜೆಪಿ ಪ್ರತಿಪಾದಿ ಸುತ್ತಿರುವ ನಕಾರಾತ್ಮಕ ರಾಜಕೀಯ ವಿರುದ್ಧ ಸಾಧಿಸಲಾಗಿರುವ ಜಯ ಇದು. ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿನ ಜಯ ಮಹತ್ವದ್ದು.
 - ಸೋನಿಯಾ ಗಾಂಧಿ, ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next