ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಬಿ.ಎಸ್. ಯಡಿ ಯೂರಪ್ಪ ನೇತೃತ್ವದ ಸರಕಾರದ ಕುರಿತ ಆರೋಪ ಪಟ್ಟಿಯನ್ನು ಪಕ್ಷದ ಕೆಲವೊಂದು ಸಚಿವರು ಮತ್ತು ಶಾಸಕರು ವರಿಷ್ಠರ ಮುಂದಿಟ್ಟಿದ್ದು ಸಿಎಂ ಬದಲಾವಣೆಗಾಗಿ ಮತ್ತೆ ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಸಿಎಂ ಬದಲಾವಣೆ ವಿಷಯದ ಸಂಬಂಧ ಬುಧವಾರ ಬೆಳಗ್ಗೆಯಿಂ ದಲೇ ಚರ್ಚೆಗಳು ಆರಂಭಗೊಂಡಿದ್ದವಾದರೂ ಹಲವಾರು ಹಿರಿಯ ಸಚಿವರು ಮತ್ತು ಬಿಎಸ್‌ವೈ ಅವರ ಆಪ್ತ ಶಾಸಕರು ಇವೆಲ್ಲ ಕೇವಲ ಊಹಾಪೋಹದ ವರದಿಗಳಾಗಿದ್ದು ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಈ ಕುರಿತಾಗಿನ ವದಂತಿ ಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದರು. ಇದೇ ವೇಳೆ ಹಿರಿಯ ಸಚಿವ ಆರ್. ಅಶೋಕ್ ಅವರು ದ್ವಂದ್ವ ಹೇಳಿಕೆ ನೀಡಿ ಈ ಚರ್ಚೆಗೆ ಒಂದಿಷ್ಟು ಪುಷ್ಟಿ ನೀಡಿದ್ದರು.
ಗುರುವಾರ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆದರೆ ವಿವಾದಕ್ಕೆ ಕಾರಣವಾಗಿರುವ ಜಿಂದಾಲ್‌ಗೆ ಜಮೀನು ಪರಭಾರೆ ವಿಚಾರವಾಗಿ ನ್ಯಾಯಾಲಯದ ತೀರ್ಪಿನ ಬಳಿಕವೇ ಅಂತಿಮ ನಿರ್ಧಾರಕ್ಕೆ ಬರಲು ಸಂಪುಟ ತೀರ್ಮಾನಿಸಿದೆ. ಆದರೆ ಸಂಪುಟ ಸಭೆ ಸುಲಲಿತವಾಗಿ ನಡೆದಿಲ್ಲ ಎಂಬುದನ್ನು ಸಿಎಂ ಹೇಳಿಕೆ ಮತ್ತು ವರ್ತನೆಗಳೇ ಸೂಚ್ಯವಾಗಿ ಹೇಳುತ್ತಿದ್ದವು. ಗುರುವಾರ ಬೆಳಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಈ ಹಿಂದೆಯೇ ಪಕ್ಷದ ವರಿಷ್ಠರು ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಮೂಲಕ ನನ್ನ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರು ಮತ್ತು ನಾಯಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಸದ್ಯ ನನ್ನ ಆದ್ಯತೆ ಜನಹಿತದ ರಕ್ಷಣೆಯಾಗಿದೆ. ರಾಜ್ಯದ ಜನತೆ ಕೋವಿಡ್‌ನಿಂದ ಸಂಕಷ್ಟಕ್ಕೀಡಾಗಿದ್ದು ಅವರ ರಕ್ಷಣೆಗಾಗಿ ಮತ್ತು ಕೋವಿಡ್ ನಿಯಂತ್ರಣಕ್ಕಾಗಿ ಶಾಸಕರು, ಸಚಿವರೆಲ್ಲರೂ ಜತೆಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯ ಪ್ರಯತ್ನದಲ್ಲಿ ತೊಡಗಿ ರುವ ಶಾಸಕರು ಮತ್ತು ಪಕ್ಷದ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು.
ಸಂಪುಟ ಸಭೆ ನಡೆಯುತ್ತಿರುವಾಗಲೇ ಪಕ್ಷದ ವರಿಷ್ಠರಿಂದ ಯಡಿಯೂರಪ್ಪ ಅವರಿಗೆ ಕರೆ ಬಂದಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ. ರಾಜ್ಯವಿನ್ನೂ ಕೋವಿಡ್ ಎರಡನೇ ಅಲೆಯಿಂದ ಹೊರ ಬರಲು ಹೆಣಗಾಡುತ್ತಿರುವಾಗಲೇ ಆಡಳಿತ ಪಕ್ಷದಲ್ಲಿ ನಾಯಕತ್ವ ಬದ ಲಾವಣೆ ಬೇಡಿಕೆ, ಶಾಸಕರು ಮತ್ತು ಸಚಿವರ ನಡುವೆ ಅಸಮಾಧಾನ, ಅಪಸ್ವರ ಎದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಇಡೀ ವ್ಯವಸ್ಥೆಯೇ ಒಗ್ಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯದ ಸ್ಥಿತಿ ನಮ್ಮ ಮುಂದಿದೆ.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು, ಸಚಿವರು ಪರಸ್ಪರ ವಾಕ್ಸಮರ, ನಾಯಕತ್ವ ಬದಲಾವಣೆ ಪರ- ವಿರೋಧ ಕುರಿತಂತೆ ಹೇಳಿಕೆ, ಸಹಿ ಸಂಗ್ರಹಗಳನ್ನು ನಡೆಸದೆ ಎಲ್ಲರೂ ಒಟ್ಟಾಗಿ ಆರೋಗ್ಯ ಕರ್ನಾಟಕ ಕಟ್ಟಲು ಕಟಿಬದ್ಧರಾಗಬೇಕಿದೆ. ಕೊರೊನಾದಂತಹ ಈ ಸಂಕಷ್ಟ ಮತ್ತು ಸಂದಿಗ್ಧದ ಕಾಲಘಟ್ಟದಲ್ಲಿ ಶಾಸಕರು ಮತ್ತು ಸಚಿವರು ತಮ್ಮೆಲ್ಲ ವೈಯಕ್ತಿಕ ಆಸೆ- ಆಕಾಂಕ್ಷೆ, ಭಿನ್ನಾಭಿಪ್ರಾಯಗಳನ್ನು ಮರೆತು ಮುಖ್ಯ ಮಂತ್ರಿಯೊಂದಿಗೆ ಕೈಜೋಡಿಸಿ ಜನರ ಹಿತವನ್ನು ಕಾಪಾಡಬೇಕಿದೆ.