Advertisement

Vijayapura; ನಿರುದ್ಯೋಗಿಗಳಿಂದ ಪ್ರಚಾರಕ್ಕಾಗಿ ಸಿಎಂ ಬದಲಾವಣೆ ಚರ್ಚೆ: ಎಚ್.ಕೆ ಪಾಟೀಲ

06:45 PM Nov 21, 2023 | keerthan |

ವಿಜಯಪುರ: ಉದ್ಯೋಗವಿಲ್ಲದ ಕೆಲವರು ಮಾತ್ರವೇ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಎಂಬ ವಿಷಯದಲ್ಲಿ ಹುರುಗಳಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ಮಂಗಳವಾರ ಜಿಲ್ಲೆಯ ಪ್ರವಾಸೋದ್ಯಮ ಬಲವರ್ಧನೆಗಾಗಿ ವಿಜಯಪುರ ನಗರಕ್ಕೆ ಆಗಮಿಸಿ, ಪಾರಂಪರಿಕ ವಿವಿಧ ಸ್ಮಾರಕಗಳು ಹಾಗೂ ಜಿಲ್ಲಾಧಿಕಾರಿ ಕಛೇರಿ ಇರುವ ಪಾರಂಪರಿಕ ದರ್ಬಾರ ಹಾಲ್ ವೀಕ್ಷಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನರ ಸಮಯ ಹಾಗೂ ಮಾಧ್ಯಮದ ಸಮಯ ಹಾಳುವ ಇಂಥ ಹೇಳಿಕೆಗಳನ್ನು ನೀಡುವುದು ರಾಜಕೀಯವಾಗಿ ಸರಿಯಾದ ನಿಲುವಲ್ಲ ಎಂದು ಸಿಡುಕಿದರು.

ಯಾರಿಗೆ ಉದ್ಯೋಗ ಇಲ್ಲವೋ ಅಂಥವರು ಪ್ರಚಾರಕ್ಕೆ ಅನಗತ್ಯವಾಗಿ ಮುಖ್ಯಮಂತ್ರಿ ಬದಲಾವಣೆ ಅಂತೆಲ್ಲ ಮಾತನಾಡುತ್ತಿದ್ದಾರೆ ಎಂದು ವಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಖ್ಯಮಂತ್ರಿ ಬದಲಾವಣೆ, ಸರ್ಕಾರದ ಪತನದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಪ್ರಚಾರ ಬೇಕಾಗಿದೆ ಅವರು ಸಿಎಂ ಪದದ ಬಗ್ಗೆ ಚರ್ಚೆ ಮಾಡುತ್ತಾರೆ. ಸರ್ಕಾರ ನಿದ್ದೆ ಮಾಡುತ್ತಿದೆ, ಮುಖ್ಯಮಂತ್ರಿ ಬದಲಾವಣೆಗೆ ತಂತ್ರ ನಡೆಯುತ್ತಿದೆ, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದೆಲ್ಲ ವಿಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು.

ಸ್ಮಾರಕ ರಕ್ಷಣೆಗೆ ಕಾರ್ಯಕ್ರಮ: ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ವಿಶ್ವ ಪ್ರಸಿದ್ಧ ಅದ್ಭುತ ಸ್ಮಾರಕಗಳಿದ್ದು, ಪ್ರವಾಸಿಗರ ಸ್ವರ್ಗವಾಗಿದೆ. ಆದರೆ ಬಹುತೇಕ ಸ್ಮಾರಕಗಳು ನಿರ್ಲಕ್ಷ್ಯದ ಪರಿಣಾಮ ಅವಸಾನಕ್ಕೀಡಾಗುತ್ತಿವೆ ಎಂಬ ಅಸಮಾಧಾನದ ಕೂಗು ಸ್ಥಳೀಯರಲ್ಲಿದೆ. ಹೀಗಾಗಿ ಸ್ಮಾರಕಗಳ ಸಂರಕ್ಷಣೆಗಾಗಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈಗಾಗಲೇ ಬೀದರ್ ಕಲಬುರಗಿ ಯಾದಗಿರಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಇದೀಗ ವಿಜಯಪುರ ಜಿಲ್ಲೆಯ ಪ್ರವಾಸ ಆರಂಭಿಸಲಾಗಿದೆ. ಇಲ್ಲಿನ ಸ್ಮಾರಕಗಳ ಸಿರಿ ಹಾಗೂ ದುಸ್ಥಿತಿಯ ಪರಿಣಾಮ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ದರ್ಶನ, ಪ್ರವಾಸ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

Advertisement

ಸ್ಮಾರಕಗಳ ವೀಕ್ಷಣೆ ಬಳಿಕ ಸ್ಥಳೀಯ ಇತಿಹಾಸಕಾರರ, ತಜ್ಞರು, ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಆಸಕ್ತರೊಂದಿಗೆ ಸಭೆ ನಡೆಸಿ, ಚರ್ಚೆ ನಡೆಸಲಾಗುತ್ತಿದೆ. ಬುಧವಾರ ಇತಿಹಾಸದ ಭಾಗಗಳನ್ನು ಸ್ಮಾರಕಗಳ ನೈಜತೆ ಹಾಗೂ ಸಂರಕ್ಷಣೆಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗುತ್ತದೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಬೆಳವಣಿಗೆಗೆ ಪುರಾತತ್ವ ಇಲಾಖೆ ಕಾಯ್ದೆ ತೊಡಕಾಗಿರುವ ಕುರಿತು ನನಗೆ ಮಾಹಿತಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ವಿವರಿಸಿದರು.

ಬಳಿಕ ಐತಿಹಾಸಿಕ ಸ್ಮಾರಕಗಳಲ್ಲಿರೋ ಸರ್ಕಾರಿ ಕಚೇರಿಗಳನ್ನು ವೀಕ್ಷಣೆ ಮಾಡಿದ ಸಚಿವರು, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಖಜಾನೆ ಇಲಾಖೆ, ಗಗನ ಮಹಲ್, ಆನಂದ ಮಹಲ್, ಆದಿಲ್ ಶಾಹಿ ಅರಸರ ದರ್ಬಾರ್ ಹಾಲ್, ಆಡಳಿತಾತ್ಮಕ ಸಭಾಂಗಣಗಳು, ಶೇಖರಣಾ ಕಚೇರಿಗಳು, ಹಲವು ಮಹಡಿಗಳ ಆದಿಲ್ ಶಾಹಿ ಅರಮನೆ, ಧ್ವನಿ ವೈಶಿಷ್ಟ್ಯದ ಸ್ಮಾರಕಗಳು, ಶ್ರೀನರಸಿಂಹ-ಸರಸ್ವತಿ ದೇವಸ್ಥಾನಗಳನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ನಡಿಗೆಯ ಮೂಲಕವೇ ವೀಕ್ಷಿಸಿದರು.

ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕಧೋಂಡ, ಜಿಲ್ಲಾಧಿಕಾರಿ ಭೂಬಾಲನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next