Advertisement

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿ

06:39 PM Jan 19, 2022 | Team Udayavani |

ಬೆಂಗಳೂರು: ನಾನು ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರು ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ. ನಾನು, ಬೊಮ್ಮಾಯಿ‌ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ನಾವು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಮೂವತ್ತು ವರ್ಷಗಳಿಂದ ನಮ್ಮ ಸಂಬಂಧ ಇದ್ದು,ಯಾವುದೇ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ. ರಾಜಕೀಯ ಮಾತ್ರ ಅಲ್ಲ, ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬೊಮ್ಮಾಯಿ‌ ತಿಳಿ ಹೇಳುತ್ತಾ ಬಂದಿದ್ದಾರೆ. ನನಗೆ ಬೊಮ್ಮಾಯಿ‌ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಬೊಮ್ಮಾಯಿ‌ ಅವರಿಗೆ ನನ್ನ ಬಗ್ಗೆ ಯಾವುದೇ ಅಸಮಾಧಾನ ಇಲ್ಲ.ದೂರುಗಳು ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದರು.

ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, 2023 ರವರೆಗೂ ಬೊಮ್ಮಾಯಿ‌ ಸಿಎಂ ಆಗಿರುತ್ತಾರೆ. ಬೊಮ್ಮಾಯಿ‌ ಬಹಳ ಉತ್ತಮ ಆಡಳಿತ ಕೊಡುತ್ತಿದ್ದಾರೆ. ಅವರ ಆಡಳಿತಕ್ಕೆ ನಾವೆಲ್ಲರೂ ಖುಷಿಯಾಗಿದ್ದೇವೆ. ಯಾವುದೇ ರೀತಿಯಲ್ಲೂ ಸಿಎಂ ಬದಲಾವಣೆ ಇಲ್ಲ ಎಂದರು.

ಖಾಲಿ ಇರುವ ಸಚಿವ ಸ್ಥಾನ ಭರ್ತಿ ಸಿಎಂ ಪರಮಾಧಿಕಾರವಾಗಿದ್ದು, ಉಚಿತವಾಗಿರುವ ಸಮಯದಲ್ಲಿ ಅದನ್ನು ಭರ್ತಿ ಮಾಡುತ್ತಾರೆ ಎಂದರು.

ಕೆಲವು ಸಚಿವರನ್ನು ಕೈ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸಿಎಂ ಪರಮಾಧಿಕಾರ ಆಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ ಎಂದರು.

Advertisement

ರಾಜ್ಯ ಬಿಜೆಪಿ ಘಟಕದಲ್ಲಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯ ಪದಾಧಿಕಾರಿಗಳನ್ನು ಬದಲಿಸುವ ಪವರ್ ಇರುವುದು ರಾಷ್ಟ್ರೀಯ ನಾಯಕರಿಗೆ. ಅಂತಹ ಅಧಿಕೃತ ಘೋಷಣೆ ಏನೂ ಇಲ್ಲ. ಕಟೀಲ್ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಟೀಲ್ ಈಗಾಗಲೇ ಎರಡೂವರೆ ವರ್ಷ ಅವಧಿ ಪೂರೈಸಿದ್ದಾರೆ. ಪಕ್ಷದಲ್ಲಿ ಅಧ್ಯಕ್ಷರ ಅವಧಿ ಇರುವುದು ಮೂರು ವರ್ಷ ಮಾತ್ರ,ಕಟೀಲ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷ, ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ನೂರಕ್ಕೆ ನೂರು ಬದ್ಧ ಎಂದರು.

ಎಂಟು ತಿಂಗಳಿಂದ ನಾನು ದೆಹಲಿ, ಬಾಂಬೆ, ನಾಗಪುರ, ಅಹಮದಾಬಾದ್ ಕಡೆ ಹೋಗಿಲ್ಲ. ನಾನು ರಾಷ್ಟ್ರೀಯ ನಾಯಕರು, ಸಂಘ ಪರಿವಾರದ ನಾಯಕರನ್ನು ಯಾರನ್ನೂ ಭೇಟಿ ಮಾಡಿಲ್ಲ ಭೇಟಿ ಮಾಡಿದ್ದು ಇದ್ದರೆ ಹೇಳಿ ನೀವು ಹೇಳಿದಂತೆ ನಾನು ಕೇಳುತ್ತೇನೆ. ಬೊಮ್ಮಾಯಿ‌ ಮುಂದಿನ ಅವಧಿಗೂ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಇವತ್ತು ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತಿದ್ದೇನೆ, ಉಳಿದವರು ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ವೀಕೆಂಡ್ ಕರ್ಫ್ಯೂ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ಫ್ಯೂ ಬಗ್ಗೆ ವೈದ್ಯರು, ವಿಜ್ಞಾನಿಗಳು ಕಾಲ ಕಾಲಕ್ಕೆ ರಿಪೋರ್ಟ್ ಕೊಡ್ತಾರೆ. ಬೊಮ್ಮಾಯಿ‌ ಇಂಜಿನಿಯರ್, ನಿರಾಣಿ ಇಂಜಿನಿಯರ್, ಕರ್ಫ್ಯೂ ವೈದ್ಯಕೀಯ ಕ್ಷೇತ್ರದ ವಿಷಯ. ಹೀಗಾಗಿ ಅವರು ಕೊಡುವ ವರದಿ ಇಟ್ಟುಕೊಂಡು ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಭಿಪ್ರಾಯ ಸರ್ಕಾರದ ಪರ- ವಿರೋಧ ಇದ್ದೇ ಇರುತ್ತದೆ . ಸ್ಥಿತಿಗತಿ ನೋಡಿ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಸಮರ್ಥನೆ

ಕೂಡಲಸಂಗಮ ಹಾಗೂ ಹರಿಹರ ಪೀಠಗಳ ಸಮನ್ವಯ ಕೊರತೆ ಬಗ್ಗೆ ಸಮರ್ಥನೆ ನೀಡಿದ ನಿರಾಣಿ , ಪಂಚಮಸಾಲಿ ದೊಡ್ಡ ಸಮುದಾಯ
ಇತ್ತೀಚಿಗೆ ಕಾರ್ಯಕ್ರಮ ಹೆಚ್ಚಾಗುತ್ತಿವೆ. ಇಬ್ಬರು ಸ್ವಾಮೀಜಿಗಳಿಗೆ ಹೊಗಲು ಆಗುತ್ತಿಲ್ಲ. ಹಾಗಾಗಿ ಮೂರನೇ ಪೀಠ ಬರುತ್ತಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಯತ್ನಾಳ್ ಬಗ್ಗೆ ನಾನು ಮಾತನಾಡುವುದಿಲ್ಲ, ನಿರಾಣಿಯಾಗಿ ಮಾತನಾಡುತ್ತೇನೆ, ಸ್ವಾಮಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.ಇಬ್ಬರು ಮೀಸಲಾತಿಗೆ ಶ್ರಮ ಹಾಕುತ್ತಿದ್ದಾರೆ. ಅವರದೆ ರೀತಿಯಲ್ಲಿ ಮೀಸಲಾತಿಗೆ ಹೋತಾಡುತ್ತಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next