ಹಾವೇರಿ: ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಚರ್ಚೆ ವಿಚಾರ ಅಪ್ರಸ್ತುತವಾಗಿದ್ದು, ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಅ ಧಿಕಾರಕ್ಕೆ ತರುತ್ತೇವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ನಮ್ಮ ಹೋರಾಟ ಕೋಮುವಾದಿ ಪಕ್ಷದ ವಿರುದ್ಧ. ಕೆಲವರು ತಮ್ಮ ಭಾವನೆ, ವಿಚಾರಗಳನ್ನು ಹೇಳಿರಬಹುದು. ಆ ಚರ್ಚೆ ಈಗ ಅಪ್ರಸ್ತುತ. ನಮ್ಮ ನಾಯಕರು ಸೋನಿಯಾ ಗಾಂಧಿ , ರಾಹುಲ್ ಗಾಂಧಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾವೆಲ್ಲರೂ ಕಾರ್ಯಕರ್ತರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿ ಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ಪಕ್ಷ ಬಿಟ್ಟು ಹೋದವರಿಗೆ ಡಿ.ಕೆ. ಶಿವಕುಮಾರ್ ಅವರು ಮರಳಿ ಪಕ್ಷಕ್ಕೆ ಬರಲು ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್ ಅವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ , ರಾಹುಲ್ ಗಾಂಧಿ ನಾಯಕತ್ವ ಒಪ್ಪಿ ಬರುವವರ ಬಗ್ಗೆ ಚರ್ಚೆ ನಡೆಯುತ್ತದೆ. ಅರ್ಜಿ ಕೊಟ್ಟ ಬಳಿಕ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಪ್ರಪಂಚದಲ್ಲಿ ಸುಳ್ಳು ಹೇಳ್ಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಪ್ರಧಾನಿ ನರೇಂದ್ರ ಮೋದಿ ಆವರಿಗೆ ಕೊಡಬೇಕು. ಕಪ್ಪು ಹಣ ತರ್ತೀವಿ ಅಂದರು ತರಲಿಲ್ಲ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕ್ತೀನಿ ಅಂದರು ಹಾಕಲಿಲ್ಲ. ಹೀಗೆ ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಿದ್ದಾರೆ. ಯುವಕರು ಕೆಲಸವಿಲ್ಲದೆ ಬೀದಿಯಲ್ಲಿ ಅಲೆಯುವ ಪರಿಸ್ಥಿತಿ ಬಂದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ ಸರ್ಕಾರವೇ 36 ಜನರನ್ನು ಕೊಲೆ ಮಾಡಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕರ ಶಾಪ ತಟ್ಟುತ್ತದೆ ಎಂದು ವಾಗ್ಧಾಳಿ ನಡೆಸಿದರು.