ಬೆಂಗಳೂರು: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಹಿಂದಿನ ಸರ್ಕಾರದಲ್ಲಿನ ಆದೇಶಗಳನ್ನು ರದ್ದುಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಗುರುವಾರ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದ ಸದಸ್ಯರನ್ನು ತಕ್ಷಣದಿಂದಲೇ ರದ್ದುಪಡಿಸುವ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡು ಅಧಿಕಾರ ಸ್ವೀಕರಿಸುವ ಮೊದಲೇ ಜುಲೈನಲ್ಲಿ ಮೈತ್ರಿ ಸರ್ಕಾರ ಹೊರಡಿಸಿದ್ದ ಎಲ್ಲ ಆದೇಶಗಳನ್ನು ರದ್ದುಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರಿಗೆ ಸೂಚಿಸಿದ್ದರು. ಅದರಂತೆ ಈಗ ಎಲ್ಲ ಇಲಾಖೆಗಳಲ್ಲಿ ಜುಲೈನಲ್ಲಿ ಆಗಿರುವ ಆದೇಶಗಳ ಪಟ್ಟಿ ನೀಡುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಆ ನಂತರ ಮೈತ್ರಿ ಸರ್ಕಾರದಲ್ಲಿ ನೇಮಕಗೊಂಡಿದ್ದ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕವನ್ನು ರದ್ದುಪಡಿಸಿದ್ದರು. ಅದಾದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿ ಸಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಟಿಪ್ಪು ಜಯಂತಿ ರದ್ದು: ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ಬಂದಿದ್ದ ಟಿಪ್ಪು ಜಯಂತಿ ಆಚರಣೆಯನ್ನೂ ರದ್ದುಗೊಳಿಸಿ ಆದೇಶ ಹೊರಡಿಸುವ ಮೂಲಕ ಹಿಂದಿನ ಸರ್ಕಾರದಲ್ಲಿನ ಬಹುತೇಕ ನಿರ್ಧಾರಗಳಿಗೆ ಯಡಿಯೂರಪ್ಪ ತಡೆಯೊಡ್ಡಿದ್ದಾರೆ.