ಮಂಗಳೂರು: ಸಿದ್ದರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅದಾನಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿರಾ, ರಾಜರಾಜೇಶ್ವರಿ ಹಾಗೂ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಆ ಮೂರು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ದೆಹಲಿಯಿಂದ ಅವರ ಬದಲಾವಣೆ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಹೇಳಿಕೆಗೆ ನಾನು ರಿಯಾಕ್ಷನ್ ನೀಡುತ್ತಿರಲಿಲ್ಲ ಮಾಧ್ಯಮದವರು ಪ್ರಶ್ನಿಸಿದ್ದಕ್ಕಾಗಿ ಪ್ರತಿಕ್ರಿಯಿಸುತ್ತಿದ್ದೇನೆ ದಿಲ್ಲಿಯಿಂದ ನನಗೆ ಸುದ್ದಿ ಬಂದಿದೆ ಎನ್ನುತ್ತಿದ್ದಾರೆ ನಾನು ಇದೇ ರೀತಿ ಹೇಳಿಕೆ ನೀಡಲೇ? ನಮಗೂ ದೆಹಲಿಯಿಂದ ಮಾಹಿತಿ ಬಂದಿದೆ ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತೆ ಅಂತ ಈ ರೀತಿಯ ಹಗುರವಾದ ಹೇಳಿಕೆಯನ್ನ ಇಷ್ಟಪಡಲ್ಲ ಜವಾಬ್ದಾರಿಯುತವಾಗಿ ಮಾತಾಡುವಂತೆ ವಿನಂತಿ ಮಾತಾಡುತ್ತೇನೆ ಎಂದರು.
ಮಂಗಳೂರಿನಲ್ಲಿ ಗುರುವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬುಧವಾರ ಯಡಿಯೂರಪ್ಪ ಅವರು ನಗರಕ್ಕೆ ಬಂದಿದ್ದು, ರಾಜ್ಯ ಕಾರ್ಯಕಾರಿಣಿಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಇದ್ದರು.