Advertisement

ಸಗಣಿ ದೀಪದ ಬೆಳಕಿನ ದೀಪಾವಳಿ ಕರ್ನಾಟಕದ ಜನತೆಗೆ ಶುಭಕರವಾಗಲಿದೆ: ಬಿಎಸ್ ವೈ

02:24 PM Nov 14, 2020 | keerthan |

ಬೆಂಗಳೂರು: ಈ ಬಾರಿ ಸಗಣಿ ದೀಪ ಎಂದು ರಾಜ್ಯಾದ್ಯಂತ ನಡೆದಿರುವ ಗೋಮಯ ದೀಪಾವಳಿ ಅಭಿಯಾನ ಅತ್ಯಂತ ಪ್ರಶಂಸನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

Advertisement

ಬಿಜೆಪಿ ಹಸು ಅಭಿವೃದ್ಧಿ ಕೋಶದ ರಾಷ್ಟ್ರೀಯ ಸಹ ಸಂಯೋಜಕ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಿಯೋಜಿತ ಉಪಾಧ್ಯಕ್ಷ ಡಾ. ಶ್ರೀಕೃಷ್ಣ ಮಿಟ್ಟಲ್ ಅವರ ನೇತೃತ್ವದ ತಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಗೋಮಯ ಉತ್ಪನ್ನಗಳ ಅಭಿಯಾನ ಮತ್ತು ಸಗಣಿ ಹಣತೆಯ ದೀಪಾವಳಿಯ ಸಂಪೂರ್ಣ ಪರಿಕಲ್ಪನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ 21 ಸಗಣಿ ದೀಪಗಳ ವಿಶೇಷ ಉಡುಗೋರೆಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಯಿತು.

“ರಾಜ್ಯದಲ್ಲಿ ಹಸುವಿನ ಸಗಣಿ ಸಂಗ್ರಹಕ್ಕಾಗಿ ಸಗಣಿಡೈರಿ ಯೋಜನೆ ಮುಂಬರುವ ದಿನಗಳಲ್ಲಿ ಪ್ರಾರಂಭವಾಗಲಿದೆ ಹಾಗೂ ಗೋಮಯ ಉತ್ಪನ್ನಗಳಿಗೆ ಕರ್ನಾಟಕ ಸರ್ಕಾರ ಅತ್ಯಧಿಕ ಪ್ರೋತ್ಸಾಹ ನೀಡಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಮ್ಮ ಮೊದಲ ಕೃಷಿ ಬಜೆಟ್ ನಲ್ಲಿ ಘೋಷಿಸಿದ್ದ ಹಸುವಿನ ಸಗಣಿಡೈರಿ ಯೋಜನೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಪರಿಸರ ಪೂರಕ ಕಾಮಧೇನು ದೀಪಾವಳಿ ಅಭಿಯಾನವನ್ನು ಅಧ್ಯಕ್ಷ ಡಾ. ವಲ್ಲಭಭಾಯಿ ಕಥಿರಿಯ ಅವರ ಸಂಕಲ್ಪದಂತೆ ರಾಷ್ಟ್ರೀಯ ಕಾಮಧೇನು ಅಯೋಗ ದೇಶದಾದ್ಯಂತ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ರಾಜ್ಯದ ಗೋ ಸಂಬಂಧಿತ ಬಹುತೇಕ ಎಲ್ಲಾ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಗೋಪ್ರೇಮಿಗಳೆಲ್ಲರೂ ಸ್ವಯಂಪ್ರೇರಿತರಾಗಿ ಕರ್ನಾಟಕದ ಮೂಲೆಮೂಲೆಗಳ ಹಳ್ಳಿಗಳಲ್ಲಿ, ಪಶುಪಾಲಕ ರೈತರಲ್ಲಿ ಹಾಗೂ ನಾಡಿನ ಜನತೆಗೆ ಸಗಣಿ ದೀಪದ ತಯಾರಿಕೆ ಮತ್ತು ಬೇಡಿಕೆಯ ಮಹತ್ವವನ್ನು ಪರಿಚಯಿಸುವ ಜಾಗೃತಿ ಮೂಡಿಸಿದರು

“ಸಗಣಿಗಳಿಂದ ತಯಾರಿಸಿದ ದೀಪಗಳನ್ನು ಬೆಳಗಿದರೆ ಪರಿಸರ ಸ್ನೇಹಿ ಮತ್ತು ಹಸು ಸಂತತಿಯ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ, ಚೀನಾ ದೇಶದ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತದೆ ಮಾತ್ರವಲ್ಲದೆ, ಭವಿಷ್ಯದಲ್ಲಿ ದೇಶಾದ್ಯಂತ ಸುಸ್ಥಿರ, ಸ್ಥಳೀಯ, ಗ್ರಾಮೀಣ ಹಾಗೂ ಪಶು ಆಧಾರಿತ ಆರ್ಥಿಕ ವ್ಯವಸ್ಥೆಗಾಗಿ ಭದ್ರ ಬುನಾದಿ ಹಾಕಲು ಸಾದ್ಯವಾಗುತ್ತದೆ. ಕರ್ನಾಟಕದಲ್ಲಿ ಪ್ರತಿದಿನ ಸರಿಸುಮಾರು 8 ಕೋಟಿ ಕೆಜಿ ಸಗಣಿ ಮತ್ತು 5 ಕೋಟಿ ಕಿ.ಲೀ ಗೋಮೂತ್ರ (ಗಂಜಲ) ಹಸುಗಳಿಂದ ಉತ್ಪತ್ತಿಯಾಗುತ್ತಿದ್ದು, ಇದು ನೂರಾರು ನಮೂನೆಯ ದೈನಂದಿನ ಬಳಕೆಯ ವಸ್ತುಗಳಿಗೆ ಕಚ್ಚಾ ವಸ್ತುವಾಗಿ ಬಳಕೆಯಾಗಬೇಕು. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಕೌಶಲ್ಯ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ಜೀವಿಕಾ, ಖಾದಿ ಗ್ರಾಮೋದ್ಯೋಗ ಮಂಡಳಿ ಮುಂತಾದ ಸರ್ಕಾರದ ಸಂಸ್ಥೆಗಳಿಂದ ಕರ್ನಾಟಕದ ರೈತರು, ಯುವಜನತೆ ಮತ್ತು ಮಹಿಳಾವರ್ಗಕ್ಕೆ ಸರಿಯಾದ ಗೋಮಯ ಉತ್ಪನ್ನಗಳ ತಯಾರಿಕೆಯ ತರಬೇತಿ, ಮೂಲಸೌಕರ್ಯಗಳ ಪೂರೈಕೆ ಪ್ರಯತ್ನಗಳಾದಲ್ಲಿ ನೆಚ್ಚಿನ ಪ್ರಧಾನಮಂತ್ರಿಯವರ ರೈತರ ಆಧಾಯ ದ್ವಿಗುಣವಾಗುವ ಮತ್ತು ಆತ್ಮ ನಿರ್ಭರ ಭಾರತದ ಸಂಕಲ್ಪ ಸಾಕಾರಗೊಳ್ಳಲು ಸಹಾಯವಾಗಲಿದೆ ಎಂದು ಕಾಮಧೇನು ದೀಪಾವಳಿ ಸಾಂಕೇತಿಕತೆ ಮತ್ತು ಗೋಮಯ ಉತ್ಪನ್ನಗಳ ಮಹತ್ವಗಳನ್ನು ಡಾ. ಶ್ರೀಕೃಷ್ಣ ಮಿಟ್ಟಲ್ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next