ಹೊಸದಿಲ್ಲಿ/ ಬೆಂಗಳೂರು: ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವರಿಷ್ಠರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿಎಂ ಬಿಎಸ್ ವೈ ದಿಲ್ಲಿ ಭೇಟಿ, ವರಿಷ್ಠರ ಜೊತೆಗಿನ ಮಾತುಕತೆಗಳು ರಾಜ್ಯದ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ.
ದಿಲ್ಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಇಂದು ಮಧ್ಯಾಹ್ನ ಸಭೆ ನಡೆದಿದೆ. ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಬಿ ಎಸ್ ಯಡಿಯೂರಪ್ಪ ಚರ್ಚೆ ನಡೆಸಿದರು.
ರಾಜ್ಯ ರಾಜಕಾರಣದ ಸ್ಥಿತಿಗತಿ, ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ, ಮುಂಬರುವ ಉಪ ಚುನಾವಣೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಬಿ ಎಸ್ ವೈ ಬೆಳಗ್ಗೆ ದಿಲ್ಲಿಯಲ್ಲಿ ಹೇಳಿದ್ದರು. ಆದರೆ ಸಭೆಯ ನಂತರ ಸುದ್ದಿಗಾರರಿಗೆ ಯಾವುದೇ ಮಾಹಿತಿ ನೀಡದೆ ಬಿಎಸ್ ವೈ ತೆರಳಿದರು.
ಇದನ್ನೂ ಓದಿ:ಯೂಥ್ ಕಾಂಗ್ರೇಸ್ ಅಧ್ಯಕ್ಷ ಚುನಾವಣೆಗೆ ನಮ್ಮ ಹಸ್ತಕ್ಷೇಪ ಇಲ್ಲ: ಡಿ.ಕೆ.ಶಿವಕುಮಾರ್
ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಃರಚನೆಯ ಬಗ್ಗೆಯೂ ಇಂದು ಚರ್ಚೆಯಾಗಿರುವ ಸಾಧ್ಯತೆಯಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ವೈ ಒಲವು ಹೊಂದಿದ್ದು, ವರಿಷ್ಠರು ಯಾವ ಸೂಚನೆ ನೀಡಿದ್ದಾರೆ ಎನ್ನುವುದು ಮಾತ್ರ ಇನ್ನಷ್ಟೇ ತಿಳಿಯಬೇಕಿದೆ.