ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ಸಮಾಜಕ್ಕೆ, ಡಿಸಿಎಂ ಸ್ಥಾನ ಕೊಡದಿದ್ದಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದು ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ವಾಲ್ಮೀಕಿ ಸಮಾಜವನ್ನು ಓಟ್ ಬ್ಯಾಂಕ್ ಮಾಡಿಕೊಂಡಿದೆ. ಚುನಾವಣಾ ಪೂರ್ವದಲ್ಲಿ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುವ ಮಾತನ್ನಾಡಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡಲಿಲ್ಲ. ಇದರಿಂದ ನಾನು ಅಂದೇ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿಎಂ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದರು.
ನನಗೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಒಂದೇ. ವಾಲ್ಮೀಕಿ ಸಮುದಾಯ ಹಾಗೂ ಸಮುದಾಯದ ಜನರೇ ನನಗೆ ಮುಖ್ಯವಾಗಿದ್ದು , ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಡಿಸಿಎಂ ಸ್ಥಾನ ಕೊಡಲಿ. ಅಲ್ಲದೆ ಈಗ ಡಿಸಿಎಂ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಹಾಗೂ ರಾಮುಲು ಇಬ್ಬರೂ ಆಕಾಂಕ್ಷಿತರಾಗಿದ್ದು, ಇಬ್ಬರಲ್ಲಿ ಯಾರಿಗೆ ಸ್ಥಾನ ಕೊಟ್ಟರೂ ಸಂತೋಷ. ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆದವರು. ಅವರ ಮಂದಿರ ನಿರ್ಮಾಣ ಮಾಡಬೇಕು. ಇನ್ನೂ ಹಂಪಿಯ ಕನ್ನಡ ವಿವಿಗೆ ವಾಲ್ಮೀಕಿ ಶ್ರೀ ಗಳ ನಾಮಕರಣ ಮಾಡಬೇಕು. ಸರ್ಕಾರ ಮುಂದೆ ನಿರ್ಮಾಣ ಮಾಡುವ ಕ್ಯಾಂಟಿನ್‌ಗಳಿಗೆ ಇಂದಿರಾ ಬದಲಾಗಿ ವಾಲ್ಮೀಕಿ ಅನ್ನ ಕುಟೀರ ಎನ್ನುವ ಹೆಸರ ನಾಮಕರಣಕ್ಕೆ ನಿರ್ಧಾರ ಮಾಡಿದೆ. ಸರಕಾರದ ನಿರ್ಧಾರವನ್ನು ಸ್ವಾಗತಿಸ್ತೇವೆ ಎಂದರು.
ಎಲ್ಲರೂ ಮತ ಬ್ಯಾಂಕ್‌ಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ದ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದರು. ಆಗ ನಾನೇ ರಾಮುಲುಗೆ ಬೇಡ. ಸಮಾಜ ಸಮಾಜದ ನಡುವೆ ವೈಮನಸ್ಸು ಮೂಡುತ್ತೆ ಎಂದಿದ್ದೆ. ಆದರೆ ಇಂದು ಆ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದರು.
ಬಜೆಟ್‌ನಲ್ಲಿ ಸಮಾಜದ ಪ್ರಗತಿಗೆ ಕೋಟಿಗಟ್ಟಲೇ ಹಣ ಇಡ್ತಾರೆ. ಆದರೆ ಅದೆಲ್ಲ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಹರಿಹಾಯ್ದರು.