ಬೆಂಗಳೂರು: ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದನಿದ್ದೇನೆ. ಕೇಂದ್ರ ಹೇಳಿದಂತೆ ಕೇಳುತ್ತೇನೆ. ಕಾರ್ಯಕರ್ತರು, ಶ್ರೀಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲ ಬಾರಿಗೆ ರಾಜೀನಾಮೆ ಸುಳಿವು ನೀಡಿದ್ದಾರೆ.
ಇಡೀ ದೇಶದಲ್ಲಿ 75 ವರ್ಷ ಮೀರಿದ ಯಾರಿಗೂ ಬಿಜೆಪಿಯಲ್ಲಿ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಜೆಪಿ ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ. ಜುಲೈ 26 ಕ್ಕೆ ನಾನು ಎರಡು ವರ್ಷ ಅಧಿಕಾರ ಪೂರೈಸುತ್ತೇನೆ. ನಂತರ ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದ ಎಂದಿದ್ದಾರೆ.
ಇದನ್ನೂ ಓದಿ:ದಿಲ್ಲಿ ಮೇಲೆ ಎಲ್ಲರ ಭಾರ! ಬಿಎಸ್‌ವೈ ಮನೆಗೆ ಮುಂದುವರಿದ ಶ್ರೀಗಳ ಭೇಟಿ
ಜುಲೈ 25 ರಂದು ಸರ್ಕಾರ ಎರಡು ವರ್ಷ ಪೂರೈಸಲಿದೆ. 26ಕ್ಕೆ ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಬಿಜೆಪಿಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದಗಳು ಎಂದ ಸಿಎಂ ಬಿಎಸ್ ವೈ, ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ.