Advertisement

ಶುದ್ಧ ನೀರಿನ ಘಟಕ ನಿರ್ಮಾಣದಲ್ಲಿ ಭಾರೀ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮ; ಸಿಎಂ

05:54 PM Dec 09, 2020 | sudhir |

ವಿಧಾನಸಭೆ: ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ಪಡೆದು ಸದನಕ್ಕೆ ಮಂಡಿಸಿ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದರು.

Advertisement

ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್‌ ಪ್ರಸ್ತಾಪಿಸಿದ ವಿಚಾರದ ಚರ್ಚೆಯಲ್ಲಿ ಪಾಲ್ಗೊಂಡ ಆಡಳಿತ ಹಾಗೂ ಪ್ರತಿಪಕ್ಷ ಜೆಡಿಎಸ್‌ ಸದಸ್ಯರು ಘಟಕ ನಿರ್ಮಾಣದಲ್ಲಿ ಭಾರೀ ವ್ಯವಹಾರ ನಡೆದಿದ್ದು ತನಿಖೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ತನಿಖೆ ನಡೆಸುವುದಾಗಿ ಪ್ರಕಟಿಸಿದರು.

ನಾನು ಕೆಲವೆಡೆ ಭೇಟಿ ನೀಡಿದಾಗ ಶುದ್ದ ಕುಡಿಯುವ ನೀರಿನ ಘಟಕಗಳು ಹಾಳಾಗಿರುವುದನ್ನು ಕಂಡಿದ್ದೇನೆ. ಎಲ್ಲಿಯೂ ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಘಟಕ ನಿರ್ಮಾಣಕ್ಕೆ ಒಂದಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೆಚ್ಚ ಮಾಡಿರುವುದು ಕಾಣುತ್ತಿದೆ. ಇದು ದೊಡ್ಡ ಹಗರಣವಾಗಿದ್ದು, ದುಬಾರಿ ಹಣ ವೆಚ್ಚ ಮಾಡಿ ಲೂಟಿ ಮಾಡಲಾಗಿದೆ. ಎರಡು ತಿಂಗಳಲ್ಲಿ ಎಲ್ಲೆಡೆ ಪರಿಶೀಲನೆ ನಡೆಸಿ ಜಂಟಿ ಸದನ ಸಮಿತಿ ವತಿಯಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ವೆಂಕಟರೆಡ್ಡಿ ಮುದ್ನಾಳ್‌, ಯಾದಗಿರಿ ಕ್ಷೇತ್ರದಲ್ಲಿ 29 ಘಟಕಗಳು ತಾತ್ಕಾಲಿಕವಾಗಿ ಸ್ಥಗತಗೊಂಡಿವೆ ಎಂದು ಸಚಿವರು ಉತ್ತರಿಸಿದ್ದಾರೆ. ಆದರೆ 48 ಘಟಕ ಸ್ಥಗಿತಗೊಂಡಿವೆ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸಿದ್ದು ಸವದಿ, ಎಲ್ಲೆಡೆ ಘಟಕಗಳು ಕೆಟ್ಟು ನಿಂತಿವೆ. ಮಾರುಕಟ್ಟೆಯಲ್ಲಿ ಮೂರ್‍ನಾಲ್ಕು ಲಕ್ಷ ರೂ. ವೆಚ್ಚಕ್ಕೆ ಯಂತ್ರೋಪಕರಣ ಲಭ್ಯವಿದ್ದು, ಹಿಂದಿನ ಸರ್ಕಾರ 10- 12 ಲಕ್ಷ ರೂ. ವೆಚ್ಚ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ, ಟೆಂಡರ್‌ ಪಡೆದವರು ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ:BJP, BJP…ಪಾಲಿಕೆ, ಪಂಚಾಯ್ತಿ ಚುನಾವಣೆ ಫಲಿತಾಂಶದ ಬಗ್ಗೆ ಜಾವ್ಡೇಕರ್ ಹೇಳಿದ್ದೇನು?

Advertisement

ಸಚಿವರ ಮೌನ ಏಕೆ?
ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಈ ಘಟಕಗಳ ನಿರ್ಮಾಣದಲ್ಲಿ ಭಾರೀ ಹಗರಣವಾಗಿದೆ. 4 ಲಕ್ಷ ರೂ. ವೆಚ್ಚದಲ್ಲಾಗುವ ಘಟಕ ನಿರ್ಮಾಣಕ್ಕೆ ನಾಲ್ಕು ಪಟ್ಟು ಹೆಚ್ಚು ಹಣಕ್ಕೆ ಟೆಂಡರ್‌ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಹಗಲು ದರೋಡೆಯಾಗಿದ್ದು, ಶೇ.99ರಷ್ಟು ಘಟಕಗಳು ಸ್ಥಗಿತಗೊಂಡಿವೆ. ಕೆ.ಎಸ್‌. ಈಶ್ವರಪ್ಪ ಅವರು ಸಚಿವರಾದಾಗ ಈ ಬಗ್ಗೆ ಮಾತನಾಡಿದ್ದರು. ನಂತರ ಯಾಕೆ ಮೌನವಾಗಿದ್ದಾರೋ ಗೊತ್ತಿಲ್ಲ ಎಂದು ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ಹಲವೆಡೆ ಘಟಕಗಳು ಹಾಳಾಗಿದ್ದು, ರಿಪೇರಿ ಸಮರ್ಪವಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ನಾನಂತೂ ಮೌನವಾಗಿಲ್ಲ. ಪ್ರತಿಷ್ಠಿತ ಹಿಪ್ಸಾಸ್‌ ಸಂಸ್ಥೆಯಿಂದ ಸರ್ವೆ ನಡೆಸಲಾಗಿದೆ. ಶೇ. 70ರಷ್ಟು ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಶೇ. 4ರಷ್ಟು ಬಂದ್‌ ಆಗಿವೆ. ಶೇ. 26ರಷ್ಟು ಘಟಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂಬುದಾಗಿ ಸಂಸ್ಥೆ ವರದಿ ನೀಡಿದೆ. ಮ್ಯಾಕ್ಸ್‌ ಆಕ್ವಾ ಏಜೆನ್ಸಿಯ ಎಫ್ಎಸ್‌ಡಿ ಮುಟ್ಟುಗೋಲು ಹಾಕಿಕೊಂಡು ಟೆಂಡರ್‌ ರದ್ಧತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸದನ ಸೂಚಿಸಿದಂತೆ ಮುಂದುವರಿಯುತ್ತೇನೆ ಎಂದು ಹೇಳಿದರು.

ಬಿಜೆಪಿಯ ಆರಗ ಜ್ಞಾನೇಂದ್ರ, ಅಲ್ಪಸಂಖ್ಯಾತರು, ಬಡವರ ಕಾಲೋನಿಗಳಲ್ಲಿ ಘಟಕ ಸ್ಥಾಪನೆಯಾಗಬೇಕಿತ್ತು. ಆದರೆ ಗಂಟು ಹೊಡೆಯಲು ಘಟಕ ನಿರ್ಮಿಸಲಾಗಿದೆ. 4 ಲಕ್ಷ ರೂ. ವೆಚ್ಚದಲ್ಲಾಗುವ ಘಟಕಕ್ಕೆ 15- 20 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದರೆ ಎಷ್ಟು ಗಂಟು ಹೊಡೆದಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಯು.ಟಿ. ಖಾದರ್‌, ಯೋಜನೆಯ ಅನುಷ್ಠಾನದಲ್ಲಿ ಸಮಸ್ಯೆ ಇದೆ. ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದಡಿ ಘಟಕ ನಿಮಾರ್ಣವಾಗಿದ್ದು, ಸಚಿವರನ್ನು ಒಮ್ಮೆ ಪರಿಶೀಲಿಸಲಿ ಎಂದು ಸಲಹೆ ನೀಡಿದರು. ಜೆಡಿಎಸ್‌ನ ರವೀಂದ್ರ ಶೀಕಂಠಯ್ಯ, ಹಗರಣದ ಬಗ್ಗೆ ತನಿಖೆ ನಡೆಸುವುದು ಸ್ವಾಗತಾರ್ಹ. ಜತೆಗೆ ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿಪಡಿಸಬೇಕು ಎಂದು ಕೋರಿದರು.

ನಂತರ ಮಾತನಾಡಿದ ಕೆ.ಎಸ್‌.ಈಶ್ವರಪ್ಪ, ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸುವ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಸದನ ಸೂಚಿಸಿದಂತೆ ತನಿಖೆ ನಡೆಸಲು ಬದ್ಧ ಎಂದು ಹೇಳಿದರು. ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಚರ್ಚೆಗೆ ವಿರಾಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next