Advertisement

ಕಾನೂನು ಪ್ರಕಾರ ಕ್ರಷರ್‌, ಗಣಿಗಾರಿಕೆ ನಡೆಸುವವರಿಗೆ ತೊಂದರೆ ಕೊಡಬೇಡಿ: ಸಿಎಂ

01:21 AM Feb 03, 2021 | Team Udayavani |

ಬೆಂಗಳೂರು: ಕಾನೂನು ಪ್ರಕಾರ ಲೈಸೆನ್ಸ್‌ ಪಡೆದು ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ ನಡೆಸುತ್ತಿರುವವರಿಗೆ ತೊಂದರೆ ಕೊಡಬಾರದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Advertisement

ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಸರಕಾರಿ ಕಾಮಗಾರಿ ಸೇರಿ ಸಾರ್ವಜನಿಕರ ಕಾಮಗಾರಿಗಳಿಗೆ ಜಲ್ಲಿ, ಮರಳು, ಕಲ್ಲು ಅಗತ್ಯವಿದೆ. ಅಧಿಕಾರಿಗಳು ಹುಣಸೋಡು ಪ್ರಕರಣದ ಬಳಿಕ ಅಧಿಕೃತವಾಗಿ ಲೈಸೆನ್ಸ್‌ ಹಾಗೂ ಕಾನೂನು ಬದ್ಧವಾಗಿದ್ದರೂ ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ಗೆ ಅವಕಾಶ ಕೊಡುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಎಂದರು.

ಕಾನೂನು ಪ್ರಕಾರ ನಡೆಯುತ್ತಿರುವ ವ್ಯವಹಾರ ಹಾಗೂ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದು. ಜತೆಗೆ ಅಕ್ರಮಕ್ಕೆ ಅವಕಾಶ ಕೊಡಬಾರದು. ಅಕ್ರಮವಾಗಿ ನಡೆಯುತ್ತಿರುವುದನ್ನು ಮುಚ್ಚಿಸಿ ಕಾನೂನು ಪ್ರಕಾರ ಅವಕಾಶವಿದ್ದರೆ ಮಾತ್ರ ಅರ್ಜಿ ಪಡೆದು ಎಲ್ಲ ಷರತ್ತು ಪೂರೈಸಿದ ಬಳಿಕ ಅನುಮತಿ ಕೊಡಿ ಎಂದು ಹೇಳಿದರು.

ವಾಪಸ್‌ ಪಡೆಯಿರಿ
ಈ ಮಧ್ಯೆ, ಬಿಜೆಪಿಯ ಆರಗ ಜ್ಞಾನೇಂದ್ರ ಮತ್ತು ಕೆ.ಜೆ.ಬೋಪಯ್ಯ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ನಮೂನೆ 50, 53, 57ರಡಿ ಸಲ್ಲಿಸಿದ್ದ ಬಗರ್‌ಹುಕುಂ ಸಾಗುವಳಿ ಸಂಬಂಧ ನೋಟಿಸ್‌ ನೀಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದರಿಂದ ಮಲೆನಾಡು ಭಾಗದವರಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದರು. ಈ ಕುರಿತು ಗಮನ ಹರಿಸುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ: ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ
ಶಿವಮೊಗ್ಗದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಎರಡು ಹಂತದಲ್ಲಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆಂತರಿಕ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಪ್ರತಿಪಕ್ಷದ ಸದಸ್ಯರು ಪ್ರಸ್ತಾಪಿಸಿರುವ ಶಿವಮೊಗ್ಗ ಸ್ಫೋಟ ಪ್ರಕರಣ ಸಂಬಂಧ ಉತ್ತರಿಸಿದ ಸಚಿವರು, ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಆಂಧ್ರಪ್ರದೇಶದ ಪೊಲೀಸರ ಸಹಕಾರೊಂದಿಗೆ ಅಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಅಥವಾ ಎನ್‌ಐಎಗೆ ಪ್ರಕರಣದ ತನಿಖೆ ನೀಡುವ ಅಗತ್ಯ ಸದ್ಯಕ್ಕೆ ಇಲ್ಲ. ಪೊಲೀಸ್‌ ಇಲಾಖೆಯಿಂದ ಮತ್ತು ಕಂದಾಯ ಇಲಾಖೆ ಆಯುಕ್ತರ ಮೂಲಕ ತನಿಖೆ ಆಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next