Advertisement

ಸಿಎಂ ಬೊಮ್ಮಾಯಿ ಕೇಶವಕೃಪಾದ ಕೈಗೊಂಬೆಯಾಗಿದ್ದಾರೆ: ಪ್ರಿಯಾಂಕ್ ಖರ್ಗೆ

12:29 PM Jul 29, 2022 | Team Udayavani |

ಬೆಂಗಳೂರು : ಸಿಎಂ ಕೇಶವಕೃಪಾದ ಕೈ ಗೊಂಬೆಯಾಗಿ ಕುಳಿತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Advertisement

ಅವರ ತಂದೆ ಎಸ್.ಆರ್. ಬೊಮ್ಮಾಯಿ ಹೀಗಿರಲಿಲ್ಲ. ಅವರು ವಿಶಾಲ ಮನಸ್ಥಿತಿ ಹೊಂದಿದ್ದರು. ಆದರೆ, ಈಗ ಸಿಎಂ ಬೊಮ್ಮಾಯಿ ಅವರು ಆರ್‌ಎಸ್‌ಎಸ್ ತಾಳಕ್ಕೆ ಕುಣಿಯುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಮೂವರ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಗೃಹ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಖಾಕಿ ಬಗ್ಗೆ ಭಯನೂ ಇಲ್ಲ, ಗೌರವವೂ ಇಲ್ಲ. ನಿನ್ನೆ ಸಿಎಂ ಪ್ರವೀಣ್ ಸಂತಾಪಕ್ಕೆ ತೆರಳಿದ್ದರು. ಆಗ ಕೆಲವೇ ಘಂಟೆಗಳಲ್ಲಿ ಮತ್ತೊಂದು ಕೊಲೆಯಾಗುತ್ತದೆ. ಇದರಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾಬೀತಾಗಿದೆ. ಖಾಕಿ ಬಗ್ಗೆ ಭಯವಿದೆಯೆಂದು ಹೇಳಲು ಆಗುತ್ತಿದೆಯಾ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ, ಪಿಎಫ್ಐನ್ನ ಬೆಳೆಸುತ್ತಿರುವುದು ಬಿಜೆಪಿ. ಇದನ್ನ ಸ್ವತಃ ಆರ್‌ಎಸ್‌ಎಸ್ ನ ಪ್ರಮುಖರು ಹೇಳುತ್ತಿದ್ದಾರೆ. ಇವರು ಕಾಂಗ್ರೆಸ್ ಗೆ ಉತ್ತರ ಕೊಡುವುದು ಬೇಡ. ಸಾಮೂಹಿಕ ರಾಜೀನಾಮೆ ಕೊಡುತ್ತಿರುವ ಅವರದೇ ಪಕ್ಷದ ಕಾರ್ಯಕರ್ತರಿಗೆ ಉತ್ತರ ನೀಡಲಿ. ನಮ್ಮಂತಹ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲಾ ಅಂತಾ ಅವರದೇ ಪಕ್ಷದವರು ಕೇಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕೈಮೀರುತ್ತಿದೆ. ಆದರೂ ಯೋಗಿ ಆದಿತ್ಯನಾಥ್ ರ ಯುಪಿ ಮಾಡೆಲ್ ಬಗ್ಗೆ ಮಾತನ್ನಾಡುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ: ಸಿದ್ದರಾಮಯ್ಯ ಟೀಕೆ

Advertisement

ಕುವೆಂಪು, ಬಸವಣ್ಣ ಮಾಡೆಲ್ ಎಲ್ಲಿ ಹೋಯ್ತು? ಪರಿಸ್ಥಿತಿ ಕೈತಪ್ಪಿರುವ ಕಾರಣ ಯೋಗಿ ಮಾಡೆಲ್ ಕುರಿತು ಮಾತನ್ನಾಡುತ್ತಿದ್ದಾರೆ. ಗಟ್ಟಿಯಾದ ಗೃಹ ಸಚಿವರನ್ನು ಕೇಳುತ್ತಿರುವುದು ಅವರದೇ ಪಕ್ಷದ ಯತ್ನಾಳ್ ಅಲ್ಲವಾ? ಇವರಿಗೆ ಯಾಕೆ ಆರಗ ಜ್ಞಾನೇಂದ್ರರನ್ನು ಬದಲಾಯಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.

ಈಗ 25 ಲಕ್ಷ ಪರಿಹಾರ ಕೊಡುತ್ತಿದ್ದಾರೆ. ಪರಿಹಾರ ಕೊಡುವುದಿದ್ದರೆ ಎಲ್ಲರಿಗೂ ಕೊಡಲಿ. ಇದರಲ್ಲಿ ತಾರತಮ್ಯವೇಕೆ? ಅಷ್ಟಕ್ಕೂ ಇದನ್ನ ಯಾವುದರಿಂದ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next