Advertisement

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್: ಟಿಸಿಲೊಡೆದ ಉತ್ತರ ಕರ್ನಾಟಕದ ನಿರೀಕ್ಷೆ

06:09 PM Mar 03, 2022 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಮೊದಲ ಆಯವ್ಯಯದ ಕುರಿತಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಈ ಭಾಗವನ್ನು ಸಮಗ್ರವಾಗಿ ಅರಿತಿರುವ ಸಿಎಂ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದಾರೆ ಎಂಬ ಆಶಯ ಅನೇಕರದ್ದಾಗಿದೆ.

Advertisement

ಇದಕ್ಕೆ ಪೂರಕ ಎನ್ನುವಂತೆ ಈ ಭಾಗದ ವಾಣಿಜ್ಯ ಪ್ರತಿನಿಧಿತ್ವ ಸಂಸ್ಥೆಗಳಾದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಲ್ಯಾಣ ಕರ್ನಾಟಕದ ಬೇಡಿಕೆ-ನಿರೀಕ್ಷೆಗಳ ಕುರಿತಾಗಿ ವಿವಿಧ ಪ್ರಸ್ತಾವನೆಗಳನ್ನು ಮಂಡಿಸಿವೆ. ಕೆಲವೊಂದು ಹಳೇ ಬೇಡಿಕೆಗಳೇ ಆಗಿದ್ದು, ಇನ್ನು ಕೆಲವು ಹೊಸ ಬೇಡಿಕೆ ಸೇರಿಕೊಂಡಿವೆ.

ಎರಡು ವಾಣಿಜ್ಯ ಸಂಸ್ಥೆಗಳು ತಮ್ಮ ಭಾಗದಲ್ಲಿನ ಉದ್ಯಮ ಬೆಳವಣಿಗೆ, ಇದ್ದ ಉದ್ಯಮ-ವಹಿವಾಟು ಸುಸ್ಥಿರತೆ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಿವೆ. ಜತೆಗೆ ಈ ಭಾಗದ ಕೃಷಿ, ತೋಟಗಾರಿಕೆ, ಮೂಲಸೌಲಭ್ಯ, ವಿಶೇಷ ಆರ್ಥಿಕ ಪ್ಯಾಕೇಜ್‌, ಭವಿಷ್ಯದ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಒತ್ತು ನೀಡುವ ಕಾರ್ಯ ಮಾಡಿವೆ. ಬೆಂಗಳೂರು, ಹಳೇ ಮೈಸೂರು ಭಾಗಕ್ಕೆ ಹೋಲಿಸಿದರೆ ಉದ್ಯಮ, ಮೂಲಸೌಲಭ್ಯಗಳ ದೃಷ್ಟಿಯಿಂದ ಉತ್ತರ ಕರ್ನಾಟಕ ಹಲವು ರೀತಿಯಲ್ಲಿ ಹಿಂದುಳಿದಿದೆ.

ಇದಕ್ಕೆ ಹಲವು ಕಾರಣಗಳಿವೆ. ಇರುವ ಬ್ಯಾಕ್‌ಲಾಗ್‌ ತುಂಬುವ, ಅಭಿವೃದ್ಧಿ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಡಾ| ಡಿ.ಎಂ. ನಂಜುಂಡಪ್ಪ ವರದಿ, 371(ಜೆ) ಕಲಂ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಘೋಷಣೆಯಂತಹ ಕ್ರಮಗಳು ಆಗಿದ್ದರೂ ನಿರೀಕ್ಷಿತ ಲಾಭ ದೊರೆತಿಲ್ಲ ಎಂಬ ನೋವು ಎರಡೂ ಭಾಗದ್ದಾಗಿದೆ. ಬಸವರಾಜ ಬೊಮ್ಮಾಯಿ ಮಂಡಿಸುವ 2022-23ನೇ ಸಾಲಿನ ಆಯವ್ಯಯದಲ್ಲಿ ಈ ಭಾಗದ ಅಭಿವೃದ್ಧಿ, ಉದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡಲಿ. ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ನೀಡುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂಬುದು ಹಲವರ ಅನಿಸಿಕೆಯಾಗಿದೆ.

ಕೆಸಿಸಿಐ ಬೇಡಿಕೆ ಏನು?: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅತ್ಯಂತ ಹಳೆಯ ಹಾಗೂ ಪ್ರಭಾವಿಶಾಲಿ ಸಂಸ್ಥೆಯಾಗಿದ್ದು, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಕಡೆಯ ಉದ್ಯಮ-ವ್ಯಾಪಾರ ವಲಯದ ಅಭಿವೃದ್ಧಿ, ಬೆಳವಣಿಗೆಗೆ ತನ್ನದೇ ಯತ್ನ ಕೈಗೊಳ್ಳುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 7 ಕೈಗಾರಿಕಾ ವಲಯಗಳು ಇದ್ದು, ಅವು ಬಹುತೇಕವಾಗಿ ಭರ್ತಿಯಾಗಿವೆ. ಹೊಸ ಉದ್ಯಮ ಆರಂಭಿಸಲು ಮುಂದಾಗುವವರಿಗೆ ನಿವೇಶನ, ಉದ್ಯಮ
ಸೌಲಭ್ಯಗಳ ಕೊರತೆ ಇದ್ದು, ಅದನ್ನು ನೀಗಿಸಲು ಧಾರವಾಡ -ಕಿತ್ತೂರು, ಹುಬ್ಬಳ್ಳಿ-ಶಿಗ್ಗಾಂವಿ, ಹುಬ್ಬಳ್ಳಿ-ಗದಗ, ಹುಬ್ಬಳ್ಳಿ-ಕಾರವಾರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಕೈಗಾರಿಕಾ ವಸಾಹತು ಪ್ರದೇಶಗಳನ್ನು ಆರಂಭಿಸಲು ಬರುವ ಆಯವ್ಯಯದಲ್ಲಿ ಕ್ರಮ ಕೈಗೊಳ್ಳಬೇಕು.

Advertisement

ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗದಲ್ಲಿ 12 ಸಾವಿರ ಎಕರೆ ಜಾಗವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಉತ್ಪಾದನಾ ವಲಯವೆಂದು ಗುರುತಿಸಿದ್ದು, ಧಾರವಾಡ ಮತ್ತು ಬೆಳಗಾವಿ ಹೆದ್ದಾರಿಯಲ್ಲಿ ಕಿತ್ತೂರು ಸಮೀಪ ಸುಮಾರು 3 ಸಾವಿರ ಎಕರೆ ಮೊದಲ ಹಂತದ ಯೋಜನೆಯಡಿ ಇದ್ದು, ರಕ್ಷಣೆ, ರೈಲ್ವೆ ಇಲಾಖೆಗೆ ಬೇಕಾದ ಕಚ್ಚಾ ಸಾಮಗ್ರಿ ಉತ್ಪಾದಿಸಲು ಪ್ರಾಶಸ್ತ್ಯ ನೀಡಬೇಕು.

ಗುಜರಾತ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ಹೊಸ ಬಂಡವಾಳ ಹೂಡಿಕೆ ಉತ್ತೇಜಿಸಲು ಆರ್ಥಿಕ ವಲಯವಾಗಿಸಿ ವಿಶೇಷ ಸೌಲಭ್ಯ ನೀಡಬೇಕು. ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ಯೋಜನೆ ಘೋಷಿಸಬೇಕು. ಹುಬ್ಬಳ್ಳಿ-ಧಾರವಾಡ ಎಫ್‌ಎಂಸಿಜಿ ಘಟಕ ಸ್ಥಾಪನೆಗೆ ಅನುಮೋದನೆ ಪಡೆದುಕೊಂಡಿದ್ದು, ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುವ, ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲು ಆಯವ್ಯಯದಲ್ಲಿ 20 ಕೋಟಿ ರೂ. ತೆಗೆದಿರಿಸಬೇಕು. ಗದಗ ಜಿಲ್ಲೆಯ ನರಸಾಪುರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸುಮಾರು 600 ಎಕರೆ ನಿವೇಶನ ಹಂಚಲು ಕ್ರಮ ಕೈಗೊಳ್ಳಬೇಕು.

ಹುಬ್ಬಳ್ಳಿ ಧಾರವಾಡ ಇಲ್ಲವೆ ಉತ್ತರ ಕರ್ನಾಟಕದ ಯಾವುದೇ ಪ್ರದೇಶದಲ್ಲಿ ಸೋಲಾರ್‌ ಉದ್ಯಮ ಸ್ಥಾಪನೆಗೆ ಕ್ರಮ, ಕೃಷಿ ಆಧಾರಿತ ಉತ್ಪನ್ನಗಳ ಸಂಸ್ಕರಣೆ, ರಫ್ತುಗೆ ಅಗತ್ಯ ಸೌಲಭ್ಯ ನೀಡಿಕೆ, ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ಸುಮಾರು 60 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ತಾಂತ್ರಿಕ ಪಾರ್ಕ್‌ ಸ್ಥಾಪನೆಗೆ ಕ್ರಮ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕಾರವಾರ, ಶಿರಸಿ ಭಾಗದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ. ಅದೇ ರೀತಿ ಹಂಪಿ ಸೇರಿದಂತೆ ಈ ಭಾಗದ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಬೇಕಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ 168.289 ಕಿಮೀ ರೈಲು ಮಾರ್ಗವಾದರೆ ವ್ಯಾಪಾರ-ವಹಿವಾಟು ನೆಗೆತ ಕಾಣಲಿದೆ. ಬೇಲೇಕೇರಿ ಬಂದರು ಅಭಿವೃದ್ಧಿಗೆ ಕೇಂದ್ರ ಸಜ್ಜಾಗಿದ್ದು, ರಾಜ್ಯ ಸರಕಾರ ಇದಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ರಸ್ತೆ ತೆರಿಗೆ ಅಧಿಕವಾಗಿದ್ದು, ಇದನ್ನು ಸರಿದೂಗಿಸಲು ಕ್ರಮ, ಒಣಮೆಣಸಿನಕಾಯಿ ವಹಿವಾಟಿಗೆ ಪ್ರಮುಖ ಕೇಂದ್ರವಾದ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣಕ್ಕೆ ಬೈಪಾಸ್‌ ರಸ್ತೆಗೆ ಕ್ರಮ ಕೈಗೊಳ್ಳಬೇಕೆಂಬುದು ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ನೇತೃತ್ವದ ಮಂಡಳಿ ಪ್ರಸ್ತಾವನೆಯಲ್ಲಿ ಒತ್ತಾಯಿಸಿದೆ.

ದಾಲ್‌ಮಿಲ್‌ ಉದ್ಯಮಕೆ ಸಿಗಲಿ ಟಾನಿಕ್‌ ಕಲಬುರಗಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ದಾಲ್‌ಮಿಲ್‌ ಉದ್ಯಮ. ಪ್ರಮುಖ ಆದಾಯ-ಉದ್ಯೋಗ ಉದ್ಯಮವೂ ಅದಾಗಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಸಂಕಷ್ಟ-ಕಾರಣಗಳಿಂದ 400 ದಾಲ್‌ಮಿಲ್‌ಗ‌ಳಲ್ಲಿ ಸುಮಾರು 300 ದಾಲ್‌ಮಿಲ್‌ಗ‌ಳು ಕಣ್ಣು
ಮುಚ್ಚಿವೆ.

ಉಳಿದ 100 ದಾಲ್‌ಮಿಲ್‌ಗ‌ಳು ಬದುಕುಳಿಯಲು ಸಂಘರ್ಷ ನಡೆಸುತ್ತಿವೆ. ರೋಗಗ್ರಸ್ಥ ಮಿಲ್‌ಗ‌ಳ ಪುನಶ್ಚೇತನಕ್ಕೆ ಸುಸ್ತಿಸಾಲದ ವಿಚಾರದಲ್ಲಿ ಒಂದಾವರ್ತಿ ಇತ್ಯರ್ಥ ಸೌಲಭ್ಯ, ಮಿಲ್‌ಗ‌ಳ ಪುನಾರಂಭಕ್ಕೆ ಸಾಲ ಸೌಲಭ್ಯ, ಇದ್ದ ಮಿಲ್‌ಗ‌ಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಎಂಎಸ್‌ಎಂಇ ಅಡಿಯಲ್ಲಿ ದಾಲ್‌ಮಿಲ್‌ಗ‌ಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು.ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಕಲಬುರಗಿ ಜಿಲ್ಲೆ ತೊಗರಿ ಬೆಳೆ ಉತ್ಪನ್ನ ಸ್ಥಾನ ಪಡೆದಿದೆ. ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.

ಜ್ಯುವೆಲರಿ ಪಾರ್ಕ್‌ಗೆ ಉತ್ತೇಜನ
ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಲಬುರಗಿಯಲ್ಲಿ ಜ್ಯುವೆಲರಿ ಪಾರ್ಕ್‌ ಸ್ಥಾಪನೆ, ಸಂಕಷ್ಟಕ್ಕೆ ಸಿಲುಕಿ ಬಹುತೇಕವಾಗಿ ಕಣ್ಣು ಮುಚ್ಚಿರುವ ದಾಲ್‌ಮಿಲ್‌ಗ‌ಳ ಉತ್ತೇಜನ ಸೇರಿದಂತೆ ವಿವಿಧ ಬೇಡಿಕೆಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದೆ. ಕಲಬುರಗಿಯಲ್ಲಿ ಜ್ಯುವೆಲರಿ ಪಾರ್ಕ್‌ ಸ್ಥಾಪನೆಯಿಂದ ಉದ್ಯಮ ಬೆಳವಣಿಗೆ ಜತೆಗೆ ಉದ್ಯೋವಕಾಶಕ್ಕೆ ಅನುಕೂಲವಾಗಲಿದ್ದು, ಆಯವ್ಯಯದಲ್ಲಿ ಇದಕ್ಕೆ ಒತ್ತು ನೀಡಬೇಕು. ಕಲ್ಯಾಣ ಕರ್ನಾಟಕ ವಿಶೇಷ ಸೆಲ್‌ ಅನ್ನು ಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರಿಸಿ, ಅನುಷ್ಠಾನಕ್ಕೆ ವಿಶೇಷ ಅನುದಾನ ನೀಡಬೇಕು. ಕಲಬುರಗಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಬೈಪಾಸ್‌ ಹೊರ ರಿಂಗ್‌ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ.

ಕೆಕೆಆರ್‌ಡಿಬಿ ಅನುದಾನ 5,000 ಕೋಟಿಗೆ ಹೆಚಿಸಲಿ
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರಸ್ತುತ 1,500 ಕೋಟಿ ರೂ. ಅನುದಾನ ನೀಡುತ್ತಿದ್ದು, ಇದನ್ನು ಪೂರ್ಣವಾಗಿ ವೆಚ್ಚ ಮಾಡಿದರೆ 3,000 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದು, ಇದರ ಬದಲು ಆಯವ್ಯಯದಲ್ಲಿ ಅನುದಾನ ಮೊತ್ತವನ್ನು 5,000 ಕೋಟಿ ರೂ. ಗೆ ಹೆಚ್ಚಿಸಬೇಕು. ಜತೆಗೆ ಕಲ್ಯಾಣ ಕರ್ನಾಟಕಕ್ಕಾಗಿ ಪ್ರತ್ಯೇಕ ಆಯವ್ಯಯ ಮಂಡಿಸಬೇಕು. ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂಬುದು ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪ್ರಶಾಂತ ಮನಸ್ಕರ್‌ ನೇತೃತ್ವದ ಮಂಡಳಿಯವರು ಸಿಎಂಗೆ ಸಲ್ಲಿಸಿದ
ಪ್ರಸ್ತಾವನೆಯಲ್ಲಿ ಒತ್ತಾಯಿಸಿದ್ದಾರೆ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next