ಬೆಂಗಳೂರು: ಸಚಿವ ಸಂಪುಟ ರಚನೆಗೆ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಂಪುಟ ಸೇರಲಿರುವ ಶಾಸಕರ ಪಟ್ಟಿಯನ್ನು ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಳಿಕ ಸಿಎಂ ಬೊಮ್ಮಾಯಿ ದೆಹಲಿಗೆ ಹೋಗಿ ಬಂದಿದ್ದರು. ಇದೀಗ ಮತ್ತೆ ಸಿಎಂ ದೆಹಲಿ ವಿಮಾನ ಏರಲಿದ್ದಾರೆ. ಈ ಬಾರಿ ಸಂಪುಟ ಸೇರಲಿರುವ ಶಾಸಕರ ಪಟ್ಟಿಗೆ ಅನುಮತಿ ಪಡೆದು ಹಿಂದಿರುಗುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾದ ಸಿಎಂ ಬಸವರಾಜ್ ಬೊಮ್ಮಾಯಿ
ಬುಧವಾರ ಅಥವಾ ಗುರುವಾರ ಮಹೂರ್ತ ನಿಗದಿಯಾಗುವ ಸಾಧ್ಯತೆಯಿದೆ.ದಿನೈದು ಹೊಸ ಮುಖಗಳಿಗೆ ಅವಕಾಶ ಕೊಟ್ಟು ಬಿಜೆಪಿ ಸರಕಾರದ ಅವಧಿಯಲ್ಲಿ ನಿರಂತರವಾಗಿ ಸಚಿವರಾಗಿ ಅಧಿಕಾರ ಅನುಭವಿಸಿದವರನ್ನು ಕೈ ಬಿಡುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಒಂಬತ್ತು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದು, ಅವರಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಅದಲ್ಲದೆ ಸಿಡಿ ಭಯದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದವರಿಗೂ ಈ ಬಾರಿ ಸ್ಥಾನ ಸಿಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈಗಾಗಲೇ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಅದಲ್ಲದೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆರ್. ಅಶೋಕ್, ಡಾ| ಅಶ್ವತ್ಥನಾರಾಯಣ, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಈವರೆಗೆ ಸಚಿವ ಸ್ಥಾನ ಪಡೆಯದ ಸುನಿಲ್ ಕುಮಾರ್, ಪಿ. ರಾಜೀವ್, ಅರವಿಂದ ಬೆಲ್ಲದ, ಎಸ್. ರಘು ಮುಂತಾದವರು ವರಿಷ್ಠರತ್ತ ಚಿತ್ತ ನೆಟ್ಟಿದ್ದಾರೆ. ಮಹಿಳಾ ಕೋಟಾದಲ್ಲಿ ಪೂರ್ಣಿಮಾ, ರೂಪಾಲಿ ನಾಯಕ್ ಕೂಡ ಅವಕಾಶಕ್ಕಾಗಿ ಬೇಡಿಕೆ ಮಂಡಿಸಿದ್ದಾರೆ ಎನ್ನಲಾಗಿದೆ.