Advertisement

‘ಗಂಧದ ಗುಡಿ ‘ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ

08:42 AM Oct 22, 2022 | Team Udayavani |

ಬೆಂಗಳೂರು: ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅವರು ಪುನೀತ್ ರಾಜ್ ಕುಮಾರ್ ಅವರ ‘ ಗಂಧದ ಗುಡಿ ‘ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರ ದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯ ಪಟ್ಟರು.

ಮನಸ್ಸುಗಳು ಭಾವನಾತ್ಮಕವಾದ ಶಬ್ದಗಳ ತೂಕ ಕಡಿಮೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.

ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜಕುಮಾರ್. ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು. ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ.

Advertisement

ಶ್ರೇಷ್ಠ ವ್ಯಕ್ತಿಗಳು ಅಲ್ಪಾಯುಗಳು. ಅಮೂಲ್ಯವಾದುದು ಸ್ವಲ್ಪವೇ ಇರುತ್ತದೆ (Anything precious is very little) ಎಂದರು.

ಅಪ್ಪು ನೆನಪನ್ನು ಇಷ್ಟು ವಿಜೃಂಭಣೆಯಿಂದ ಆಯೋಜಿಸಿರುವ ಡಾ. ರಾಜ್ ಕುಮಾರ್ ಕುಟುಂಬದ ಶ್ರೀಮಂತಿಕೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಅಭಿನಂದಿಸಿದರು

ಇದೇ ನವೆಂಬರ್ 1 ರಂದು ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಅಭಿಮಾನಿಗಳು, ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು.

ಅಪ್ಪು ಮೇಲಿನ ಅಭಿಮಾನದ ಕುರಿತು ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು ತಮ್ಮ ಔರಾದ್ ಪ್ರವಾಸ ಸಂದರ್ಭದಲ್ಲಿ ಯುವಕರು ಅಪ್ಪು ಭಾವಚಿತ್ರದೊಂದಿಗೆ ಬಂದು ತಮ್ಮೊಡನೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದನ್ನು ಸ್ಮರಿಸಿದರು.

ನಟ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ.ಸಿ. ನಾರಾಯಣಗೌಡ, ಆನಂದ್ ಸಿಂಗ್, ಶಾಸಕ ರಾಜೂಗೌಡ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next