Advertisement

ಪ್ರತಿಭಟನೆ ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ: ಡಿ.ಕೆ.ಶಿವಕುಮಾರ್‌

10:13 AM Dec 21, 2019 | Sriram |

ಬೆಂಗಳೂರು: ದೇಶದಲ್ಲಿ ಬ್ರಿಟಿಷರನ್ನು ಓಡಿಸಲು ಸಾವಿರಾರು ಜನ ತ್ಯಾಗ ಮಾಡಿದ್ದಾರೆ. ಅದೇ ರೀತಿ ಬಿಜೆಪಿಯನ್ನು ಓಡಿಸಲು ಜನರು ಮತ್ತೆ ದಂಗೆ ಏಳಲು ಆರಂಭಿಸಿದ್ದಾರೆ. ಇದು ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಭವಿಷ್ಯ ನುಡಿದಿದ್ದಾರೆ.

Advertisement

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನಾವಶ್ಯಕ ನಿಷೇಧಾಜ್ಞೆ ಜಾರಿಯಿಂದ ಅಹಿತರಕ ಘಟನೆ ನಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿಯೇ ಹೊಣೆ ಎಂದು ಹೇಳಿದರು.

ಅಹಿತರ ಬೆಳವಣಿಗೆ ಬಗ್ಗೆ ತಮ್ಮ ಪಕ್ಷದ ಯಾವುದೇ ನಾಯಕರಿಗೆ ಹೇಳಿಕೆ ನೀಡದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ಧಾರೆ. ಈ ಮೂಲಕ ರಾಜ್ಯದ ಎಲ್ಲ ಘಟನೆಗಳಿಗೆ ಬಿಜೆಪಿ ನಾಯಕರ ಹೇಳಿಕೆಗಳೇ ಪ್ರೇರಣೆ ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ಧಾರೆ.

ರಾಜ್ಯದಲ್ಲಿ ಏನಾಗಿದೆ ಎಂದು 144 ಸೆಕ್ಸೆನ್‌ ಹಾಕಿದ್ದೀರಿ. ಯಾರೂ ಮನೆಯಲ್ಲಿ ಮದುವೆ ಮಾಡಬಾರದಾ? ಜನರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಬಾರದಾ? ಜನರ ಅಭಿಪ್ರಾಯ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಿ. ಬ್ರಿಟೀಷರಿಗಿಂತ ಬಿಜೆಪಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಜನರು ನೇರವಾಗಿ ಸಂಸತ್ತಿನಲ್ಲಿ ಹೋಗಿ ಹೇಳಲು ಆಗುವುದಿಲ್ಲ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಇದೆ. ಪ್ರತಿಭಟನಾಕಾರರು ತಮ್ಮ ಅಭಿಪ್ರಾಯ ಹೇಳಿ ಹೋಗುತ್ತಿದ್ದರು ಎಂದರು.

ಬಿಜೆಪಿ ನಾಯಕರು ಸಂವಿಧಾನ ಮುಗಿಸಲು ಈ ಮೂಲಕ ಬುನಾದಿ ಹಾಕುತ್ತಿದ್ಧಾರೆ. ಮಹಾತ್ಮಾ ಗಾಂಧಿ, ನೆಹರು ನಾಯಕತ್ವದಲ್ಲಿ ಅಂಬೇಡ್ಕರ್‌ ಸಂವಿಧಾನಕ್ಕೆ ಅಡಿಪಾಯ ಹಾಕಿದ್ಧಾರೆ.ಅದನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಈಗ ಜಾರಿಗೆ ತಂದಿರುವ ಕಾಯಿದೆ ಸಂವಿಧಾನ ಬಾಹಿರ, ಇದು ಜನರ ನಂಬಿಕೆಯ ವಿರುದ್ಧವಾಗಿದೆ. ಅಂತಾರಾಷ್ಟ್ರೀಯ ಕಾಯಿದೆ ಹಾಗೂ ಜನರ ವಿರುದ್ಧ ಇದೆ. ಇಡೀ ದೇಶದ ಕಾನೂನಿನ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಕಳೆಯುವ ಕೆಲಸ ಮಾಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

Advertisement

ಸರ್ಕಾರ ಜನರಿಗೆ ಉದ್ಯೋಗ ಅನ್ನ ನೀಡಿ, ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ಧಾರೆ. ಇದು ಕೇವಲ ಅಲ್ಪ ಸಂಖ್ಯಾತರಿಗೆ ಪರಿಣಾಮ ಬೀರುವುದಿಲ್ಲ. ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ನಿಮಗೆ ಪ್ರಮಾಣ ಪತ್ರ ನೀಡದಿದ್ದರೆ ಜೈಲಿಗೆ ಹಾಕುತ್ತೀರಾ ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಾ. ಇಡೀ ದೇಶ ಒಗ್ಗಟ್ಟಾಗಿ ಬದುಕುತ್ತಿದೆ. ವಿಶ್ವ ಭಾರತವನ್ನು ನೋಡುತ್ತಿದೆ. ಇದು ಇಡೀ ದೇಶ ಅವಮಾನ ಪಡುವಂತೆ ಮಾಡಿದೆ. ಇದಕ್ಕೆ ಪ್ರಧಾನಿ ಅಮಿತ್‌ ಶಾ ಹೊಣೆಯಾಗಿದ್ಧಾರೆ ಎಂದು ಆರೋಪಿಸಿದರು.

ಈಗಿರುವ ದೇಶದ ಮಕ್ಕಳಿಗೆ ಉದ್ಯೋಗ ಕೊಡಲು ಆಗುತ್ತಿಲ್ಲ. ಹೊರಗಿನವರನ್ನು ತಂದು ಅವರನ್ನು ನಿರಾಶ್ರಿತರನ್ನಾಗಿಸುತ್ತಿದ್ಧಾರೆ.ಯಾರೂ ಯಾವ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಬಿಜೆಪಿಯ ಸುಳ್ಳುಗಳು ದೇಶದ ಯುವಕರನ್ನು ಕೊಲ್ಲುತ್ತಿವೆ. ಸುಳ್ಳನ್ನು ಸತ್ಯ ಎಂದು ಪ್ರಚುರಪಡಿಸುವ ಅವರ ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸುವಂತೆ ಶಿವಕುಮಾರ್‌ ಒತ್ತಾಯಿಸಿದರು.

ಜನರ ಜೊತೆ ಕಾಂಗ್ರೆಸ್‌: ಮಾಧ್ಯಮದವರನ್ನು ಬಂಧನ ಮಾಡುವ ಬಿಜೆಪಿ ಸರ್ಕಾರ ಪ್ರಚೋದನೆ ಮಾಡಿರುವ ತನ್ನ ಕಾರ್ಯಕರ್ತರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ದೇಶದ ಮಾಲಿಕರಲ್ಲ ಅವರು ಜನರ ಸೇವಕರು ಮಾತ್ರ.ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬೇರೆ ದೇಶಗಳಲ್ಲಿ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವಂತಾಗಿದೆ. ಯಡಿಯೂರಪ್ಪ ಸಹ ಸ್ವಾತಂತ್ರÂ ಹೋರಾಟಗಾರರಲ್ಲ. ಜನರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ಧಾರೆ. ಅವರ ಜೊತೆಗೆ ಕಾಂಗ್ರೆಸ್‌ ಇದೆ. ಶಾಸಕ ಯು.ಟಿ. ಖಾದರ್‌ ಯಾವುದೇ ರೀತಿಯ ಪ್ರಚೋದನಾತ್ಮಕ ಹೇಳಿಕೆ ನೀಡಿಲ್ಲ. ಬಿಜೆಪಿಯ ಎಷ್ಟು ನಾಯಕರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರೆ. ನಾವೂ ಕೂಡ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ ಇನ್ನೂ ಜೀವಂತವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next