ಹುಬ್ಬಳ್ಳಿ: ಕೇಂದ್ರ ಸರಕಾರ ಮಾದರಿಯಲ್ಲಿ, ರಾಜ್ಯ ಸರಕಾರದಿಂದಲೂ ಪೆಟ್ರೋಲ್ ಹಾಗೂ ಡೀಸಲ್ ಮೇಲೆ 7 ರೂ. ತೆರಿಗೆ ಇಳಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ನಾವು ಸಹ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದೇವೆ. ಈ ಕುರಿತು ಕೇಂದ್ರ ಗೃಹ ಹಾಗೂ ಹಣಕಾಸು ಸಚಿವರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಎಲ್ಲ ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿಮೆ ಮಾಡಬೇಕೆಂದು ಬಯಸುತ್ತೇವೆ. ಕೇಂದ್ರ ಗೃಹ ಹಾಗೂ ಹಣಕಾಸು ಸಚಿವರು ಹೇಳಿದ್ದರು, ಈ ಹಿನ್ನೆಲೆಯಲ್ಲಿ ದರ ಇಳಿಕೆ ಮಾಡುವ ತೀರ್ಮಾನ ಮಾಡಿದ್ದೇವೆ. ಇದರಿಂದಾಗಿ ರಾಜ್ಯ ಸರಕಾರ ಬೊಕ್ಕಸಕ್ಕೆ ಸುಮಾರು 2100 ಕೋಟಿ ರೂ. ಕೊರತೆಯಾಗಲಿದೆ. ಆದಾಗ್ಯೂ ಡೀಸೆಲ್ ಹಾಗೂ ಪೆಟ್ರೋಲ್ ದರ ಇಳಿಕೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:“ನಾಟಕ, ಅಸಮರ್ಪಕ”: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಲಾಲು ಪ್ರಸಾದ್ ಯಾದವ್ ವ್ಯಂಗ್ಯ
ಆರ್ಥಿಕ ತಜ್ಞರು ದರ ಇಳಿಕೆಯಿಂದ ಸರಬರಾಜು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ನೀಡಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ ನೂರು ರೂ. ದಾಟಿದ್ದರಿಂದಾಗಿ ಕಡಿಮೆ ಮಾಡಬೇಕೆಂಬ ಚಿಂತನೆ ಇತ್ತು. ಕೇಂದ್ರ ಸರಕಾರ ದೀಪಾವಳಿ ಕೊಡುಗೆಯಾಗಿ ದರ ಇಳಿಕೆ ಮಾಡಿದೆ. ಜನರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ. ದರ ಇಳಿಕೆ ತೀರ್ಮಾನ ತಡವಾಗಿದ್ದರಿಂದ ಅಧಿಕೃತ ಆದೇಶ ಹೊರಡಿಸಲಾಗಿರಲಿಲ್ಲ. ಇದೀಗ ಆದೇಶ ಹೊರಡಿಸಲಿದ್ದು, ಇಂದು ಸಂಜೆಯಿಂದಲೇ ದರ ಇಳಿಕೆ ಜಾರಿಗೆ ಬರಲಿದೆ. ಇದರಿಂದ ಎಲ್ಲ ಜನರಿಗೂ ಅನುಕೂಲವಾಗಲಿದೆ ಎಂದರು.
ಜನವರಿ 26ರಿಂದ ರಾಜ್ಯಾದ್ಯಂತ ಜನಸೇವಕ ಯೋಜನೆ ಜಾರಿಯಾಗಲಿದೆ. ಹೈಕಮಾಂಡ್ ನಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ನಾನು ದೆಹಲಿಗೆ ಹೋಗಲ್ಲ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.