ವಿಜಯಪುರ: ಜಿಲ್ಲಾ ಪ್ರವಾಸದ ವೇಳೆ ಮುಖ್ಯಮಂತ್ರಿಗೆ ನೀಡುತ್ತಿದ್ದ ಪೊಲೀಸ್ ಗೌರವ ವಂದನೆ ರದ್ದು ಪಡಿಸಿದ್ದರೂ ತಮಗೆ ಆಲಮಟ್ಟಿಯಲ್ಲಿ ಪೊಲೀಸ್ ಗೌರವ ನೀಡಿದ್ದಕ್ಕೆ ಸಿ.ಎಂ. ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಹರಿಹಾಯ್ದ ಘಟನೆ ವರದಿಯಾಗಿದೆ.
ಶನಿವಾರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಪರಿಸರದಲ್ಲಿ ಇರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಗಂಗಾ ಪೂಜೆ ನೆರವೇರಿಸಿ, ಕೃಷ್ಣೆಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾವಚನ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು. ಆಲಮಟ್ಟಿಗೆ ಆಗಮಿಸಿದಾಗ ಹೆಲಿಪ್ಯಾಡನಲ್ಲಿ ಜಿಲ್ಲೆಯ ಪೊಲೀಸರು ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿದ್ದರು.
ಇದನ್ನು ಕಂಡ ಸಿ.ಎಂ. ಬೊಮ್ಮಾಯಿ ಪೊಲೀಸ್ ಗೌರವ ವಂದನೆ ನೀಡುವ ಸಂದರ್ಭದಲ್ಲಿ ಎಸ್ಪಿ ಆನಂದಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ನೀಡಿದ ಆದೇಶವನ್ನೇ ಪಾಲಿಸುವಲ್ಲಿ ಇಷ್ಟೊಂದು ನಿರ್ಲಕ್ಷ್ಯವೇ ಎಂದು ಸ್ಥಳದಲ್ಲಿದ್ದ ಬೆಳಗಾವಿ ಉತ್ತರ ವಲಯದ ಐಜಿಪಿ ಸತೀಶಕುಮಾರ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ.
ಗೌರವ ವಂದನೆ ಏರ್ಪಡಿಸುವುದು ಬೇಡ ಎಂದು ಈ ಮೊದಲೇ ಸೂಚನೆ ನೀಡಿರಲಿಲ್ಲವೇ? ನಿಮ್ಮ ಕಿರಿಯ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಬಳಿ ಎಸ್‌ಪಿ ಮತ್ತು ಐಜಿಪಿ ಇಬ್ಬರೂ ಕ್ಷಮೆ ಯಾಚಿಸಿದರು.