Advertisement

ಶ್ಮಶಾನ ಕಾರ್ಮಿಕರ ಸೇವೆ ಖಾಯಂಗೆ ಕ್ರಮ: ಸಿಎಂ ಬೊಮ್ಮಾಯಿ 

12:19 AM Jan 12, 2023 | Team Udayavani |

ಬೆಂಗಳೂರು: ಪೌರಕಾರ್ಮಿಕರ ಮಾದರಿಯಲ್ಲಿ ರಾಜ್ಯದ ಶ್ಮಶಾನ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಶ್ಮಶಾನ ಕಾರ್ಮಿಕರೊಂದಿಗೆ ಬುಧವಾರ ತಮ್ಮ ರೇಸ್‌ಕೋರ್ಸ್‌ ರಸ್ತೆಯ ಅಧಿಕೃತ ನಿವಾಸದಲ್ಲಿ ಬೆಳಗಿನ ಉಪಾಹಾರ ಸೇವಿಸಿದ ಮುಖ್ಯಮಂತ್ರಿಯವರು, ಬಳಿಕ ಬೆಂಗಳೂರಿನ ಶ್ಮಶಾನ ಕಾರ್ಮಿಕರ ಜತೆ ಮಾತನಾಡಿದರು.

ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ಮಾದರಿಯಲ್ಲಿ 130ಕ್ಕೂ ಹೆಚ್ಚು ಶ್ಮಶಾನ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಶ್ಮಶಾನ ಕಾರ್ಮಿರ ಸೇವೆಯನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾನು ಒಂದು ಕಾರ್ಯಕ್ರಮಕ್ಕೆ ಹೋದಾಗ ಭೇಟಿಯಾದ ಶ್ಮಶಾನ ಕಾರ್ಮಿಕನ ಪರಿಸ್ಥಿತಿಯನ್ನು ತಿಳಿದು ಕೊಂಡೆ. ಆಗಲೇ ಶ್ಮಶಾನ ಕಾರ್ಮಿಕರಿಗೆ ಏನಾದರೂ ಮಾಡಬೇಕೆಂದು ಅಧಿಕಾರಿಗಳ ಜತೆ ಚರ್ಚಿಸಿ, ಬಿಬಿಎಂಪಿಯಲ್ಲಿ 130 ಮಂದಿಗೆ ಪೌರಕಾರ್ಮಿಕರ ರೀತಿಯಲ್ಲಿ ನೇಮಕ ಮಾಡಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 300 ಜನ ಇದ್ದಾರೆ ಅವರನ್ನೂ ಖಾಯಂಗೊಳಿಸುವ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲಿ ಚಿತಾಗಾರಗಳ ಮುಂದೆ ಸರತಿ ಸಾಲು ನಿಂತದ್ದು ಕಂಡು ಅಂದಿನ ಸಿಎಂ ಯಡಿ ಯೂರಪ್ಪ ಅವರು ಬೆಂಗಳೂರಿಗೆ ವಿದ್ಯುತ್‌ ಚಿತಾಗಾರ ಹೆಚ್ಚಿಸುವುದಾಗಿ ತಿಳಿಸಿದ್ದರು. ಈ ವರ್ಷದ ಬಜೆಟ್‌ನಲ್ಲಿ ಚಿತಾಗಾರ ವ್ಯವಸ್ಥೆಯನ್ನು ಹೆಚ್ಚಿಸಲು ಕ್ರಮ ಜರಗಿಸಲಾಗುವುದು ಎಂದರು. ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ದೇವೇಂದ್ರನಾಥ್‌ ಮತ್ತಿತರರಿದ್ದರು.

Advertisement

ಸತ್ಯ ಹರಿಶ್ಚಂದ್ರ ಬಳಗ ಎಂದು ಕರೆಯಬೇಕು
ಶ್ಮಶಾನ ಕಾರ್ಮಿಕರಿಗೆ ಗೌರವ ಕೊಡಬೇಕು. ಇವರನ್ನು ಇನ್ನು ಮುಂದೆ “ಸತ್ಯ ಹರಿಶ್ಚಂದ್ರ ಬಳಗ’ ಎಂದು ಕರೆಯಬೇಕು ಎಂದು ಸ್ಥಳದಲ್ಲಿದ್ದ ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚಿಸಿದರು. ಈಗಾಗಲೇ ಪೌರ ಕಾರ್ಮಿಕರನ್ನು ಪೌರ ನೌಕರರು ಎಂದು ಕರೆಯಬೇಕು ಎಂದು ನಾನು ಹೇಳಿದ್ದೇನೆ. ಅವರು ಇನ್ನಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಶ್ಮಶಾನ ಕಾರ್ಮಿಕರ ಸೇವೆ ಖಾಯಂಗೊಂಡರೆ ಅವರಿಗೂ ಹೆಚ್ಚಿನ ಸೌಲಭ್ಯ ಸಿಗಲಿವೆ ಎಂದರು.

ಭಾವುಕರಾದ ಸಿಎಂ
ಮುಖ್ಯಮಂತ್ರಿಯವರಿಗೆ ಶ್ಮಶಾನ ಕಾರ್ಮಿಕರು ಸತ್ಯ ಹರಿಶ್ಚಂದ್ರನ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಿದರು. ಇದನ್ನು ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಸಿಎಂ, ನಾನು ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಹತ್ತು-ಹಲವು ಪ್ರತಿಮೆ-ಸ್ಮರಣಿಕೆಗಳು ನನಗೆ ನೀಡಲಾಗಿದೆ. ಆದರೆ, ಸತ್ಯ ಹರಿಶ್ಚಂದ್ರನ ಪ್ರತಿಮೆ ಸಿಕ್ಕಿರುವುದು ಇದೇ ಮೊದಲು. ಇದು ನನ್ನ ಪಾಲಿಗೆ ಅತ್ಯಂತ ಮೌಲ್ಯ ಇರುವಂಥದ್ದು. ನಾನು ದಿನನಿತ್ಯ ನೋಡುವ ಮತ್ತು ಪೂಜೆ ಮಾಡುವ ಜಾಗದಲ್ಲಿ ಇದನ್ನು ಇಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next