ಬೆಂಗಳೂರು: 15-18ನೇ ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಗೋವಿಂದರಾಜನಗರದ ಮೂಡಲಪಾಳ್ಯದಲ್ಲಿ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಕ್ಕಳನ್ನು ನೋಡಿ ಸಂತೋಷವಾಯಿತು. ಬೆಂಗಳೂರಿನ ಪ್ರದೇಶದಲ್ಲಿ ಇಂತಹ ವ್ಯವಸ್ಥಿತ ಶಾಲೆ ಇದೆ ಎನ್ನುವುದನ್ನು ಸೋಮಣ್ಣ ತೋರಿಸಿದ್ದಾರೆ. ಈ ಲಸಿಕೆ ಕಾರ್ಯಕ್ರಮ ಹೊಸ ವರ್ಷದಲ್ಲಿ ನಡೆಯುತ್ತಿದೆ. ಹೊಸವರ್ಷದಂದು ಹೊಸ ಅಭಿಯಾನ ನಡೆಯುತ್ತಿದೆ. ಮೋದಿಜಿಯವರ ದೂರದೃಷ್ಟಿಯ ಪರಿಣಾಮದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಸುರಕ್ಷಿತ ಆರೋಗ್ಯ ನಿಮ್ಮದಾಗಲಿ ಎಂದು ಮಕ್ಕಳಿಗೆ ಆಶಿಸುತ್ತೇನೆ. ಕೋವಿಡ್ ಸೋಂಕನ್ನು ನಾವ್ಯಾರು ನೀರಿಕ್ಷಿಸಿರಲಿಲ್ಲ, ಕೋವಿಡ್ ಯಾವ ರೀತಿ ಹರಡುತ್ತದೆಂದು ಗೊತ್ತಿರಲಿಲ್ಲ. ಅದು ಸವಾಲಿನ ಸಂಗತಿ ಅಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲ್ಲಿ ನಿಂತು ನಿಭಾಯಿಸಿದ್ದಾರೆ. ಕಾಲಕಾಲಕ್ಕೆ ಮೋದಿಯವರು ತೆಗೆದುಕೊಂಡ ನಿರ್ಧಾರ ವಿಶ್ವಕ್ಕೆ ಮಾದರಿಯಾಗಿದೆ. ಗರೀಬ್ ಕಲ್ಯಾಣ, ವ್ಯಾಕ್ಸಿನೇಷನ್‌ಎಲ್ಲವನ್ನೂ ಮಾಡಿದರು. ವಿಶ್ವದಲ್ಲಿ ವ್ಯಾಕ್ಸಿನೇಷನ್ ಆಗಬೇಕಾದಾಗ ಭಾರತದ ಸಂಸ್ಥೆಗಳಿಗೆ ವ್ಯಾಕ್ಸಿನ್ ತಯಾರಿಸಲು ಅನುಮತಿ ನೀಡಿದರು ಎಂದರು.
ಇದನ್ನೂ ಓದಿ:ಕೋವಿಡ್ ಕ್ರಮಗಳ ಬಗ್ಗೆ ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ: ಸಿಎಂ ಬೊಮ್ಮಾಯಿ
ವಸತಿ ಸಚಿವ ಸೋಮಣ್ಣ ಮಾತನಾಡಿ, ಮೂರನೇ ಅಲೆ ಎಷ್ಟು ಗಂಭೀರವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ. ಮೋದಿಯವರು ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಆರಂಭ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸಾಂಕೇತಿಕವಾಗಿ ಸಿಎಂ ಉದ್ಘಾಟನೆ ಮಾಡಿದ್ದಾರೆ. ಸಿಎಂ ಜನಪರ ಕಾರ್ಯಗಳಿಗೆ ನಾವು ಒತ್ತು ಕೊಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಉದಾಸೀನದಿಂದ ದೊಡ್ಡ ಸಮಸ್ಯೆಯಾಗುತ್ತದೆ. 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ನಿಮ್ಮ ಜತೆ ನಾವಿದ್ದೇವೆಂಬ ಸಂದೇಶವನ್ನು ಸರ್ಕಾರ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅಶ್ವಥ ನಾರಾಯಣ, ಆರೋಗ್ಯ ಸಚಿವ ಕೆ ಸುಧಾಕರ್, ಬೈರತಿ ಬಸವರಾಜು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.