ಮಡಿಕೇರಿ: ಜಿಲ್ಲೆಯ ಮಾದಾಪುರ ಬಳಿ ಜಂಬೂರಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ವತಿ ಯಿಂದ ನಿರ್ಮಿಸಲಾಗಿರುವ 106 ಮನೆಗಳನ್ನು ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು.
ವರ್ಚುವಲ್ ಸಭೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಇನ್ಫೋಸಿಸ್ ಪ್ರತಿಷ್ಠಾನದ ಪ್ರಮುಖರು ಪಾಲ್ಗೊಂಡಿದ್ದರು.
ಬೊಮ್ಮಾಯಿ ಅವರು ಮಾತ ನಾಡಿ ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದು ಕೊಂಡ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿ, ವಸತಿ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೀಟ್ ಪಿಜಿ 2021ರ ಕೌನ್ಸೆಲಿಂಗ್ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು
ಸರಕಾರದ ಜೊತೆ ಇನ್ಫೋಸಿಸ್ ಪ್ರತಿಷ್ಠಾನವು ಕೈಜೋಡಿಸಿರುವುದು ಮಾದರಿ ಕೆಲಸವಾಗಿದೆ. ಪ್ರವಾಹ ದಿಂದ ನಿರಾಶ್ರಿತರಾದ ಕುಟುಂಬ ಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತಿರುವುದು, ಸಂತ್ರಸ್ತ ಕುಟುಂಬ ಗಳಿಗೆ ಆಶಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
200 ಮನೆ ನಿರ್ಮಾಣ
ಸುಧಾಮೂರ್ತಿ ಅವರು ಮಾತ ನಾಡಿ, ಜಂಬೂರಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ 200 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಪೂರ್ಣಗೊಂಡಿರುವ 106 ಮನೆಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ನಿರ್ಮಿಸಲಾಗಿದೆ ಎಂದರು.