ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಾವೋಸ್ ಪ್ರವಾಸಕ್ಕೆ ತೆರಳುವುದು ಖಚಿತವಾಗಿದ್ದು, ಸಚಿವಾಲಯ ಅವರ ಪ್ರವಾಸದ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿಗಳು ಮೇ 22 ರಂದು ಬೆಳಗ್ಗೆ 10.30 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಆರಂಭಿಸಲಿದ್ದು, ದುಬೈ ಗೆ ತೆರಳಿ ಅಲ್ಲಿಂದ ಅದೇ ದಿನ ರಾತ್ರಿ 12 ಗಂಟೆಯ ವೇಳೆಗೆ ಸ್ವಿಟ್ಜರ್ ಲ್ಯಾಂಡ್ ನ ದಾವೋಸ್ ತಲುಪಲಿದ್ದಾರೆ.
ಮೇ 23 ಮತ್ತು 24 ರಂದು ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೇ 26 ರಂದು ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಮರಳಲಿದ್ದಾರೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ವಿಶ್ವ ಆರ್ಥಿಕ ಶೃಂಗ ಸಭೆಗೆ ದೇಶದ ಇಬ್ಬರು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದ್ದು, ಬಸವರಾಜ ಬೊಮ್ಮಾಯಿ ಅವರೊಂದಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಆಹ್ವಾನ ನೀಡಲಾಗಿದೆ.
ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳು, ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಸಂಪುಟ ವಿಚಾರದ ಗೊಂದಲ, ಮತ್ತು ಅವರು ಶುಕ್ರವಾರ ದಿಢೀರ್ ದೆಹಲಿ ಪ್ರವಾಸಕ್ಕೆ ತೆರಳಿದ್ದು, ದಾವೋಸ್ ಪ್ರವಾಸಕ್ಕೆ ತೆರಳುವ ಬಗೆಗೆ ಅನುಮಾನ ಹುಟ್ಟು ಹಾಕಿತ್ತು, ಆದರೆ ದೆಹಲಿಯಿಂದ ಪೊಲಿಟಿಕಲ್ ಕ್ಲಿಯರೆನ್ಸ್ ಸಿಕ್ಕ ಕಾರಣ ಸಿಎಂ ಪ್ರವಾಸ ಅಧಿಕೃತವಾಗಿದೆ.