ಬೆಂಗಳೂರು : ಬಿಜೆಪಿಯ ಪಾಲಿಗೆ ಇದುವರೆಗೂ ಮರೀಚಿಕೆಯಾಗೇ ಉಳಿದಿರುವ ಹಳೆ ಮೈಸೂರು ಭಾಗದಲ್ಲಿ ಮತಬೇಟೆಗಾಗಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಈಗ ಅಖಾಡಕ್ಕೆ ಇಳಿದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಗಮನ ಹರಿಸಿ ಎಂದು ಬಿಜೆಪಿ ವರಿಷ್ಠರು ಕಳೆದ ವಿಧಾನಸಭಾ ಚುನಾವಣಾ ಕಾಲದಿಂದಲೂ ಕಿವಿಮಾತು ಹೇಳುತ್ತಲೇ ಇದ್ದಾರೆ. ಆದರೆ ರಾಜ್ಯ ನಾಯಕರು ಈ ದಿಶೆಯಲ್ಲಿ ಮುಂದುವರಿದಿರಲಿಲ್ಲ. ಆದರೆ ಕಳೆದೊಂದು ತಿಂಗಳಲ್ಲಕ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಖುದ್ದು ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದು ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ಲ್ಯಾನಿಂಗ್ ನಡೆಸುತ್ತಿರುವ ಬೊಮ್ಮಾಯಿ ಒಂದಿಷ್ಟು ಜನರ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿದ್ದಾರೆ. ಬೆಂಗಳೂರು ಹೊರತುಪಡಿಸಿ ಈ ಸಂಘಟನಾ ಕೆಲಸ ಪ್ರಾರಂಭವಾಗಲಿದ್ದು, ಸಚಿವರಾದ ಆರ್.ಅಶೋಕ್ , ಡಾ.ಸುಧಾಕರ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಈ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಅಂಬರೀಷ್ ಪುತ್ರ ಸೇರ್ಪಡೆ ?
ಮಂಡ್ಯದ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಬಿಜೆಪಿ ಅಂಬರೀಷ್ ಪುತ್ರ ಅಭಿಷೇಕ್ ಸೇರ್ಪಡೆಗೆ ಲೆಕ್ಕಾಚಾರ ಹಾಕಿದೆ. ಈ ಬಗ್ಗೆ ಯೋಗೇಶ್ವರ ಮೂಲಕ ದಾಳ ಉರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಪಕ್ಷ ಸೇರ್ಪಡೆಯಾದರೆ ಒಕ್ಕಲಿಗ ಮತಬ್ಯಾಂಕ್ ಸೆಳೆಯುವುದಕ್ಕೆ ಸಹಕಾರ ವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಹಳೆಮೈಸೂರು ಭಾಗದಲ್ಲಿ ಮತ ಸಂಗ್ರಹಣೆಗಾಗಿ ಸಿಎಂ ಬೊಮ್ಮಾಯಿ ಈಗಾಗಲೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.