ಬೆಂಗಳೂರು : ‘ಬರುವಂತಹ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಯಾವ ರೀತಿ ಜನ ಮನ್ನಣೆ, ಪ್ರೀತಿ ಇತ್ತು,ಅದಕ್ಕೆ ತಕ್ಕಂತೆ ಸರ್ಕಾರ ಎಲ್ಲ ರೀತಿಯ ಗೌರವ ಕೊಡಲು ಸಿದ್ದವಿದೆ’ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಸಂಜೆ ಮುಖ್ಯಮಂತ್ರಿಗಳು ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಪತ್ನಿ ಅಶ್ವಿನಿ ಸೇರಿದಂತೆ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಚಿವರಾದ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಜೊತೆಯಲ್ಲಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ”ನಾವೆಲ್ಲರೂ ನಟ ಪುನೀತ್ ರಾಜ್ ಕುಮಾರ್ ಕಳೆದುಕೊಂದು ಇಂದಿಗೆ ೮ ದಿನಗಳು ಆಯಿತು.
ಇಂದು ಅವರ ಕುಟುಂಬ ಸದಸ್ಯರಿಗೆ ನಾವೆಲ್ಲರೂ ಸಾಂತ್ವನ ಹೇಳಿದೇವು. ಮುಂದೆ ಆಗಬೇಕಿರುವ ಹಲವು ಕಾರ್ಯಕ್ರಮ ಗಳ ಬಗ್ಗೆ
ಅವರ ಕುಟುಂಬ ಸದಸ್ಯರು ಕುಳಿತು ಚರ್ಚೆ ಮಾಡಿ, ತೀರ್ಮಾನ ಮಾಡ್ತಿದ್ದಾರೆ” ಎಂದರು.
”ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ,ಇವತ್ತು ಕೂಡ ಸಾರ್ವಜನಿಕರು ಅವರ ಸಮಾಧಿಯ ದರುಶನವನ್ನು ಪಡೆಯುತ್ತಿದ್ದಾರೆ.
ಕೆಲವು ಕಾರ್ಯಕ್ರಮಗಳು ಶಾಂತಿಯುತವಾಗಿ, ಸುಸೂತ್ರವಾಗಿ ನಡೆಸಲು ಸಹಕಾರ ಕೋರಿದ್ದಾರೆ. ಅದಕ್ಕೆ ಸಂಪೂರ್ಣ ಸರ್ಕಾರ ಅವರ ಜೊತೆಗೆ ಇರುತ್ತದೆ” ಎಂದರು.
”ಸರ್ಕಾರದ ಕ್ರಮಕ್ಕೆ ಅವರು ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಅದು ನಮ್ಮ ಕರ್ತವ್ಯ, ಆ ಕರ್ತವ್ಯ ವನ್ನು ನಿಭಾಯಿಸಿದ್ದೇವೆ, ಅದರ ಜೊತೆಗೆ ಪ್ರೀತಿ ವಿಶ್ವಾಸ ಕೂಡ ಇದೆ ಅನ್ನೋದನ್ನು ಹೇಳಿದ್ದೇವೆ. ಬರುವಂತ ದಿನಗಳಲ್ಲಿ ಅಪ್ಪುಗೆ ಯಾವ ರೀತಿ ಜನ ಮನ್ನಣೆ, ಪ್ರೀತಿ ಇತ್ತು,ಅದಕ್ಕೆ ತಕ್ಕಂತೆ ಸರ್ಕಾರ ಎಲ್ಲ ರೀತಿಯ ಗೌರವ ಕೊಡಲು ಸಿದ್ದವಿದೆ. ಇಡೀ ಕರ್ನಾಟಕ ಜನತೆ ನಿಮ್ಮ ಜೊತೆಗೆ ಇರುತ್ತದೆ ಎಂದು ಧೈರ್ಯ ಹೇಳಿದ್ದೇವೆ.” ಎಂದರು.
‘ಸದ್ಯ ಅಪ್ಪು ಕುಟುಂಬ ದುಃಖ ದಲ್ಲಿದೆ, ಹೀಗಾಗಿ ಬೇರೆ ಏನು ಚರ್ಚೆ ಮಾಡಿಲ್ಲ. ನವೆಂಬರ್ 16 ರ ನಂತರ ಇನ್ನೊಂದು ಬಾರಿ ಕುಳಿತು ಮಾತನಾಡುತ್ತೇವೆ’ ಎಂದು ತಿಳಿಸಿದರು.
‘ನವೆಂಬರ್ 16 ರ ನಂತರ ರಸ್ತೆಗೆ ಅಪ್ಪು ಹೆಸರು ನಾಮಕರಣ ಸೇರಿದಂತೆ ಮುಂದೆ ಏನೇಲ್ಲ ಮಾಡಬೇಕು ಎಂದು ಚರ್ಚಿಸಿ ನಿರ್ಧಾರ ಮಾಡುತ್ತೇವೆ’ ಎಂದರು.
ನವೆಂಬರ್ 16ಕ್ಕೆ ಫಿಲ್ಮ್ ಚೇಂಬರ್ ನವರು ಒಂದು ಕಾರ್ಯಕ್ರಮ ಮಾಡುತ್ತಿದ್ದಾರೆ,ಅದಕ್ಕೆ ಸರ್ಕಾರದಿಂದ ಭದ್ರತೆ ಸೇರಿದಂತೆ ಅಗತ್ಯ ಸಹಕಾರ ಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ , ಚಿನ್ನೇಗೌಡ, ಎಸ್ ಎ ಗೋವಿಂದರಾಜ್, ಯುವರಾಜಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.