Advertisement

ಕಾಶಿಗೆ ರಾಜ್ಯದ ಹೆಚ್ಚು ಭಕ್ತರು ಭೇಟಿ ನೀಡಲಿ: ಸಿಎಂ

08:42 PM Jul 14, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿಯಿಂದ ದಿವ್ಯ ಕಾಶಿಯು ಭವ್ಯ ಕಾಶಿಯಾಗಿ ಅಭಿವೃದ್ಧಿಗೊಂಡಿದ್ದು, ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಲಿ ಎಂಬ ಕಾರಣಕ್ಕೆ ಸಹಾಯಧನ ಯೋಜನೆ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದ ಬಳಿಕ ವೆಬ್‌ ಪೋರ್ಟಲ್‌ ಅನಾವರಣಗೊಳಿಸಿ ಮಾತನಾಡಿದ ಅವರು, ಹಿಂದೆ ಕಾಶಿಗೆ ಹೋದರೆ ಅಲ್ಲಿನ ಅವ್ಯವಸ್ಥೆಯಿಂದ ಬೇಸರ ಉಂಟಾಗುತ್ತಿತ್ತು.   ಈಗ ಅದು ಸಂಪೂರ್ಣ ಬದಲಾವಣೆ ಆಗಿದೆ. ದೇವಸ್ಥಾನದ ಆವರಣವನ್ನು ಸ್ವತ್ಛಗೊಳಿಸಿ ಭಕ್ತಿ ಮೂಡುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಕಾಶಿ ಯಾತ್ರಿಕರಿಗೆ ಸಹಾಯ ಮಾಡಲು ನೇರವಾಗಿ ಹಣ ವರ್ಗಾಯಿಸುವ ಡಿಬಿಟಿ ವ್ಯವಸ್ಥೆ ಜಾರಿಯಾಗಿದೆ. ಯೋಜನೆಯನ್ನು ಸರಳಗೊಳಿಸುವ ಮೂಲಕ ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ಧಪಡಿಸಲಾಗಿದೆ ಎಂದರು.

ಪ್ರೋತ್ಸಾಹ ಧನ ನನ್ನ ಆಶಯವಾಗಿತ್ತು: ಜೊಲ್ಲೆ:

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ಮಾಡಬೇಕು ಎನ್ನುವುದು ಬಹಳಷ್ಟು ಜನರ ಅಭಿಲಾಷೆಯಾಗಿರುತ್ತದೆ. ಅದಕ್ಕೆ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ನನ್ನ ಬಹಳ ದಿನಗಳ ಆಶಯವಾಗಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಘೋಷಿಸಿ ಸೂಕ್ತ ಅನುದಾನವನ್ನೂ ಒದಗಿಸಿದ್ದಾರೆ. ಜತೆಗೆ, ಭಾರತ್‌ ಗೌರವ್‌ ಯೋಜನೆ ಪ್ರಾರಂಭಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.

Advertisement

ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next