Advertisement

ಬಿಎಸ್‌ವೈ ನೆರಳಾಗಬೇಡಿ:  ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು

07:31 AM Jul 29, 2021 | Team Udayavani |

ಬೆಂಗಳೂರು: ಯಡಿ ಯೂರಪ್ಪ ಅವರ ಮಾತಿನಂತೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸ ಲಾಗಿದೆ. ಆದರೆ ಬಿಜೆಪಿಯ ತತ್ವ ಸಿದ್ಧಾಂತವನ್ನು ಜಾರಿಗೊಳಿಸುವ ಜತೆಗೆ ಯಡಿಯೂರಪ್ಪ ಅವರ ನೆರಳಿನಿಂದ ಹೊರಬಂದು ಮುಂದಿನ ಲಿಂಗಾಯತ ನಾಯಕನಾಗಿ ಬೆಳೆಯುವ ಸುವರ್ಣಾವಕಾಶವನ್ನು ಪಕ್ಷವು ಬೊಮ್ಮಾಯಿ ಅವರಿಗೆ ನೀಡಿದೆ.

Advertisement

ನೂತನ ನಾಯಕನ ಆಯ್ಕೆಗಾಗಿ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್‌ ಅವರು ಯಾವುದೇ ಒತ್ತಡಗಳಿಗೆ ಒಳಗಾಗದೆ ಕೆಲಸ ಮಾಡುವಂತೆ ನೂತನ ಸಿಎಂ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ. ಜತೆಗೆ ಬಿಎಸ್‌ವೈ

ಛಾಯೆಯಿಂದ ಹೊರಬರುವಂತೆ ಸೂಚನೆ ನೀಡಿದ್ದಾರೆ. ಹಿರಿಯ ಮುಖಂಡ ಯಡಿಯೂರಪ್ಪ ಅವರ ಅಪಾರ ಅನುಭವದ ಲಾಭ ಪಡೆಯಿರಿ; ಆದರೆ ಅವರ “ಛಾಯೆ’ಯಂತೆ ವರ್ತಿಸದೆ ನಿಮ್ಮದೇ ನಾಯಕತ್ವ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆಗೆ ಮುನ್ನ ಬೊಮ್ಮಾಯಿ ಬಳಿ ಪ್ರತ್ಯೇಕವಾಗಿ ಮಾತನಾಡಿದ ಧರ್ಮೇಂದ್ರ ಪ್ರಧಾನ್‌, ವರಿಷ್ಠರ ಸೂಚನೆಗಳನ್ನು ಮನವರಿಕೆ ಮಾಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಜನಮೆಚ್ಚುಗೆಗೆ ಪಾತ್ರರಾಗಿ ಎಂದು ಸಲಹೆ ನೀಡಿದ್ದಾರೆ.

ಕೊನೇ ಕ್ಷಣ ಅದೃಷ್ಟ?:

Advertisement

ಬೊಮ್ಮಾಯಿ ಅವರಿಗೆ ಕೊನೇ ಕ್ಷಣದಲ್ಲಿ ಅದೃಷ್ಟ ಖುಲಾಯಿಸಿತೇ? ವೀಕ್ಷಕರು ದಿಲ್ಲಿಯಿಂದ ಹೊರಟಾಗ ಅರವಿಂದ ಬೆಲ್ಲದ ಹೆಸರಿದ್ದು, ಬೆಂಗಳೂರು ತಲುಪುವಷ್ಟರಲ್ಲಿ ಬೊಮ್ಮಾಯಿಯಾಗಿ ಬದಲಾಯಿತೇ – ಹೀಗೊಂದು ಚರ್ಚೆ ಬಿಜೆಪಿ ವಲಯದಲ್ಲಿ ಬಿರುಸಾಗಿದೆ.

ಬಿಎಸ್‌ವೈ ರಾಜೀನಾಮೆ ಸಲ್ಲಿಸಿ ದಾಗ ಯಾರನ್ನೂ ಸಿಎಂ ಹುದ್ದೆಗೆ ಸೂಚಿಸುವುದಿಲ್ಲ ಎಂದಿದ್ದರು. ಆದರೂ ಆಪ್ತ ಬೊಮ್ಮಾಯಿ ಅವರನ್ನು ಪರಿಗಣಿಸುವಂತೆ ಬೇಡಿಕೆ ಇರಿಸಿದ್ದರು ಎನ್ನಲಾಗುತ್ತಿದೆ.

ಆದರೆ ವರಿಷ್ಠರು ಇದನ್ನು ಪರಿಗಣಿಸದೆ ಬೇರೆಯೇ ಲೆಕ್ಕಾಚಾರದಲ್ಲಿದ್ದರು. ಹೀಗಾಗಿ ಯಡಿಯೂರಪ್ಪ ಮುನಿಸಿಕೊಂಡು ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿಯುವ ಸಂದೇಶ ರವಾನಿಸಿದ್ದರು ಎನ್ನಲಾಗಿದೆ.

ಧರ್ಮೇಂದ್ರ ಪ್ರಧಾನ್‌ ಮತ್ತು ಕಿಶನ್‌ ರೆಡ್ಡಿ ದಿಲ್ಲಿಯಿಂದ ಹೊರಡುವಾಗ  ವರಿಷ್ಠರು ಅರವಿಂದ ಬೆಲ್ಲದ ಅವರ ಹೆಸರು ಸೂಚಿಸಿದ್ದು, ಆರೆಸ್ಸೆಸ್‌ ಕೂಡ ಅವರನ್ನೇ ಸೂಚಿಸಿತ್ತು ಎನ್ನಲಾಗುತ್ತಿದೆ.  ಆದರೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ಬೆಂಬಲ, ಸಮುದಾಯಕ್ಕೆ ಯಡಿಯೂರಪ್ಪ ಮೇಲಿರುವ ಗೌರವದ ಬಗ್ಗೆ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ಸನ್ನಿವೇಶದಲ್ಲಿ ಯಡಿಯೂರಪ್ಪರನ್ನು ಎದುರು ಹಾಕಿಕೊಂಡರೆ ಸಂಘರ್ಷ ಉಂಟಾಗಬಹುದು. ಕಾಂಗ್ರೆಸ್‌ ಇದರ ಲಾಭ ಪಡೆಯಲು ಪ್ರಯತ್ನಿಸಬಹುದು ಎಂಬ ಮಾಹಿತಿಯನ್ನು ಅಮಿತ್‌ ಶಾರಿಗೆ ನೀಡಿದ್ದರು. ಅಮಿತ್‌ ಶಾ ಅವರು  ಮೋದಿ ಜತೆೆ ಚರ್ಚಿಸಿ, ಬಿಎಸ್‌ವೈ ಸೂಚಿಸಿದವರಿಗೆ ಆದ್ಯತೆ ನೀಡುವಂತೆ ಮನವರಿಕೆ ಮಾಡಿದ್ದರು ಎನ್ನಲಾಗುತ್ತಿದೆ.  ವೀಕ್ಷಕರು ಯಡಿಯೂರಪ್ಪ ನಿವಾಸ “ಕಾವೇರಿ’ಗೆ ತೆರಳಿ ನೀವು ಸೂಚಿಸಿದವರನ್ನು ಸಿಎಂ ಮಾಡಲು ಪಕ್ಷ ಸಿದ್ಧ ಎಂಬ ವರಿಷ್ಠರ ಸಂದೇಶ ತಿಳಿಸಿದ್ದರು ಎನ್ನಲಾಗಿದೆ.

ಬೇಕಾದವರನ್ನು ಆಯ್ಕೆ ಮಾಡಿ!:

ವೀಕ್ಷಕರು ತಮ್ಮನ್ನು ಭೇಟಿ ಮಾಡಿದಾಗ ಯಡಿಯೂರಪ್ಪ “ನಿಮಗೆ ಬೇಕಾದವರನ್ನು ಆರಿಸಿ’ ಎಂದು ಬೇಸರದಿಂದ ಹೇಳಿದ್ದರು. ಆದರೆ ಆಯ್ಕೆಯನ್ನು ತನಗೆ ಬಿಟ್ಟರೆ ಹಿಂದೆಯೇ ಸೂಚಿಸಿದ್ದ ಬೊಮ್ಮಾಯಿ ಅವರನ್ನು ಸಿಎಂ ಮಾಡಬೇಕು ಎಂದಿದ್ದರು. ಕೊನೆಗೆ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಯಡಿಯೂರಪ್ಪ ಅವರಿಂದಲೇ ಘೋಷಿಸಲಾಯಿತು.

 

 -ಶಂಕರ ಪಾಗೋಜಿ

 

Advertisement

Udayavani is now on Telegram. Click here to join our channel and stay updated with the latest news.

Next