ಕುಷ್ಟಗಿ: ಕುಷ್ಟಗಿ ಪಟ್ಟಣಕ್ಕೆ ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಅ.12 ರಂದು ಮಧ್ಯಾಹ್ನ 3ಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಮಳೆಯ ನಡುವೆಯೂ ನೆನೆಗುದಿಯಲ್ಲಿದ್ದ ರಸ್ತೆಯ ತೇಪೆ ಕಾಮಗಾರಿ, ಬೃಹತ್ ವೇದಿಕೆ ನಿರ್ಮಾಣ ಇನ್ನಿಲ್ಲದ ವೇಗ ಪಡೆದುಕೊಂಡಿದೆ.
ಸೋಮವಾರ ಬೆಳಗಿನ ಜಾವ ಮಳೆ ಸುರಿದು ಬೆಳಗ್ಗೆ ಬಿಡುವು ನೀಡಿದ್ದ ಆದರೂ ಮಂಗಳವಾರ ತಡರಾತ್ರಿ ಮತ್ತೆ ಮಳೆಯಾಗಿದೆ.ಇದರಿಂದ ರಾಯಚೂರ ರಸ್ತೆಯಲ್ಲಿರುವ ವೇದಿಕೆ ಹಾಗೂ ಹೆಲಿಪ್ಯಾಡಿನಲ್ಲಿ ನೀರು ನಿಂತಿದೆ. ಹವಮಾನ ಇಲಾಖೆಯ ವರದಿ ಪ್ರಕಾರ ಅ.12 ರವರೆಗೂ ಮಳೆಯಾಗುವ ಮುನ್ಸೂಚನೆ ನೀಡಿದ್ದು ಆಯೋಜಕರು ಇದ್ಯಾವುದನ್ನು ಲೆಕ್ಕಿಸದೇ ಮಳೆ ನಡುವೆಯೂ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸಿಎಂ ಆಗಮನದ ಹಿನ್ನೆಲೆಯಲ್ಲಿ ರಸ್ತೆಯ ತೇಪೆ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ. ಬೆಳಗ್ಗೆ ಪಟ್ಟಣದ ಮುಖ್ಯರಸ್ತೆ ಬಸವೇಶ್ವರ ವೃತ್ತ ಹಾಗೂ ವಾಹನ ದಟ್ಟನೆ ಜಾಸ್ತಿ ಹಿನ್ನೆಲೆಯಲ್ಲಿ ರಾತ್ರಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಆದರೆ ಕಳೆದೆರೆಡು ದಿನಗಳಿಂದ ಪ್ರತಿ ದಿನ ರಾತ್ರಿ ಮಳೆಯಾಗುತ್ತಿದೆ. ಈ ನಡುವೆ ರಸ್ತೆಯ ಗುಂಡಿ ಮುಚ್ಚಿದ್ದು ಡಾಂಬರೀಕರಣದ ತೇಪೆ ಕೆಲಸ ಸಾದ್ಯವಾಗಿಲ್ಲ.
ಇದನ್ನೂ ಓದಿ : ಟಾಟಾ ಟಿಯಾಗೋ ಇವಿ ಬುಕಿಂಗ್ ಆರಂಭ; 315 ಕಿ.ಮೀ. ಮೈಲೇಜ್ ಕೊಡುವ ಕಾರು
ಪುರಸಭೆ ಪೌರಕಾರ್ಮಿಕರು, ರಸ್ತೆಯ ವಿಭಜಕದ ಮೇಲೆ ಹಸಿ ಕಳೆ ಕಸ,ತ್ಯಾಜ್ಯ ಹಾಗೂ ರಸ್ತೆಯ ಪಕ್ಕದ ತ್ಯಾಜ್ಯ ತೆರವುಗೊಳಿದ್ದಾರೆ. ಪೌರಕಾರ್ಮಿಕರು ಕುಷ್ಟಗಿ ಪಟ್ಟಣದ ಸ್ವಚ್ಚತೆ ಕೆಲಸ ಪಕ್ಕಕ್ಕೆ ಇಟ್ಟು ಈ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಆ ದಿನ ಸಿಎಂ ಹೆಲಿಕಾಪ್ಟರ್ ನಲ್ಲಿ ರಾಯಚೂರು ರಸ್ತೆಯ ಹ್ಯಾಲಿಪ್ಯಾಡ್ ನಲ್ಲಿ ಬಂದಿಳಿದು ನೇರವಾಗಿ ಶಾಖಾಪೂರ ರಸ್ತೆಯಲ್ಲಿರುವ ಬಿಜೆಪಿ ನೂತನ ಕಛೇರಿ ಉದ್ಘಾಟಿಸುವರು. ಹೀಗಾಗಿ ಸಿಎಂ ಸಾಗಲಿರುವ ರಸ್ತೆಯನ್ನು ಅಚ್ಚು ಕಟ್ಟಾಗಿಸುವ ಕೆಲಸ ವೇಗ ಪಡೆದುಕೊಂಡಿದೆ. ಸಿಎಂ ಸಾಗುವ ರಸ್ತೆಯಲ್ಲಿ ಬಿಜೆಪಿ ಧ್ವಜಾದ ಕಂಬಗಳು ನೆಟ್ಟಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹಾಗೂ ಸಚಿವರು ಪಕ್ಷದ ಮುಖಂಡರ ತಂಡ ಆಗಮಿಸಲಿದೆ. ರಾಯಚೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ವೇದಿಕೆ ಇತರೇ ವ್ಯವಸ್ಥೆಯ ಬಗ್ಗೆ ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸರ್ಕ್ಯೂಟ್ ಹೌಸ್ ನಲ್ಲಿ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪಅವರೊಂದಿಗೆ ಮುಂದಿನ ರೂಪರೇಷೆಗಳ ಬಗ್ಗೆ ಚರ್ಚಿಸಿದ್ದಾರೆ.