ಕುಷ್ಟಗಿ :ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ದಿಯ ಬಗ್ಗೆ ಸಾರ್ವಜನಿಕರು ಎಷ್ಟೇ ಬೊಬ್ಬೆಯಿಟ್ಟರೂ ರಸ್ತೆ ಅಭಿವೃದ್ಧಿ ಏನೂ ಮಾಡದ ಲೋಕೋಪಯೋಗಿ ಇಲಾಖೆ… ಇದೀಗ ರಾತ್ರೋರಾತ್ರಿ ರಸ್ತೆಯ ತೇಪೆ ಕೆಲಸ (ಪ್ಯಾಚ್ ವರ್ಕ) ಮುಂದಾಗಿದೆ.
ಇದೇ ಅ.12 ರಂದು ಜನೋತ್ಸವ ಕಾರ್ಯಕ್ರಮಕ್ಕೆ ಕುಷ್ಟಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುವ ಹಿನ್ನೆಲೆಯಲ್ಲಿ ಲೋಕಪಯೋಗಿ ಇಲಾಖೆ ಏಕಾಏಕಿ ರಸ್ತೆ ಅಭಿವೃದ್ಧಿಗೆ ಮುಂದಾಗಿರುವ ಇಲಾಖೆಯ ನಿಲುವಿಗೆ ಸಾರ್ವಜನಿಕರ ಕೋಪ ನೆತ್ತಿಗೇರಿದೆ.
ಕಳೆದ ನಾಲ್ಕಾರು ವರ್ಷಗಳ ಹಿಂದಿನಿಂದ ಸಿಂದನೂರು- ಹೆಮ್ಮಡಗ ರಾಜ್ಯ ಹೆದ್ದಾರಿ ಪಟ್ಟಣದ ಬಸವೇಶ್ವರ ವೃತ್ತ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಮುಂದೆ ಹದಗೆಟ್ಟು ಹಾಳಾಗಿ, ಹಳ್ಳ ಹಿಡಿದಿತ್ತು. ಈ ರಸ್ತೆಯಲ್ಲಿ ಪಾದಚಾರಿಗಳು, ಬೈಕ ಸವಾರ, ವಾಹನ ಸವಾರರು ತೊಂದರೆ ಅನುಭವಿಸಿರುವುದು ಅಷ್ಟಿಷ್ಟಲ್ಲ. ರಸ್ತೆಯ ಅಭಿವೃದ್ಧಿಯ ಬಗ್ಗೆ ಸದರಿ ರಸ್ತೆಗೆ ಡಿವೈಡರ್ ಅಳವಡಿಸುವ ಬಗ್ಗೆ ಸಾಕಷ್ಟು ಹೋರಾಟಗಳಾಗಿವೆ. ಆಗ ಕಿಂಚಿತ್ತು ರಸ್ತೆಯ ಅಭಿವೃದ್ಧಿ ಯ ಬಗ್ಗೆ ತಲೆಕೆಡಿಸಿಕೊಳ್ಳದ ಲೋಕೋಪಯೋಗಿ ಪಟ್ಟಣದ ರಸ್ತೆ ನಮಗೆ ಸಂಬಂಧಿಸಿಲ್ಲ ಹೇಳುತ್ತಲೇ ಸಾರ್ವಜನಿಕರನ್ನು ಇದೀಗ ಯಾಮಾರಿಸಿದೆ.
ಅ.12 ರಂದು ಸಿಎಂ ಬಸವರಾಜ ಬೊಮ್ಮಾಯಿ ಬರುವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಯನ್ನು ನಿದ್ದೆಗೆಟ್ಟು ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಕೆಲಸ ಶನಿವಾರ ಅಹೋರಾತ್ರಿ ನಡೆದಿದೆ. ಲೋಕೋಪಯೋಗಿ ಇಲಾಖೆಯ ಈ ಡೋಂಗಿ ನಿಲುವಿಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಡರಾತ್ರಿ ಕಾಮಗಾರಿಯನ್ನು ತಡೆದು ಪ್ರತಿಭಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಸಮಜಾಯಿಷಿಗೆ ಪ್ರಯತ್ನಿಸಿದರೂ ಜಗ್ಗದೇ ಇದ್ದಾಗ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ ರಾಠೋಡ್ ಮದ್ಯೆ ಪ್ರವೇಶಿಸಿ ಕೆಲವು ಯುವಕರನ್ನು ವಶಕ್ಕೆ ತೆಗೆದುಕೊಳ್ಳುವ ಹೈಡ್ರಾಮ ನಡೆಯಿತು. ನಂತರ ಪೊಲೀಸ ಬಂದೋಬಸ್ತಿನಲ್ಲಿ ಅಹೋರಾತ್ರಿ ಕಾಮಗಾರಿ ನಡೆಯಿತು. ಈ ರಸ್ತೆಯ ಅವಸ್ಥೆಯ ಬಗ್ಗೆ ಕಳೆ ಅ.6 ರಂದು ಉದಯವಾಣಿ ಪತ್ರಿಕೆ ಸಿಎಂ ಕೃಪೆಯಿಂದ ಕುಷ್ಟಗಿ ಮುಖ್ಯ ರಸ್ತೆ ಅಭಿವೃದ್ದಿ ಹೊಂದುವುದೇ? ವರದಿ ಉಲ್ಲೇಖನೀಯವಾಗಿದೆ.