ಗಂಗಾವತಿ : ಮೂಲಸೌಕರ್ಯಗಳನ್ನು ಉಳಿಸಿಕೊಂಡು ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಯೋಜನೆ ರೂಪಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆ.1 ರಂದು ಅಂಜನಾದ್ರಿಗೆ ಭೇಟಿ ನೀಡಿ ರೈತರು ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಲಿದ್ದಾರೆಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಹಿಂದೂಗಳ ಪವಿತ್ರ ಶಕ್ತಿಕೇಂದ್ರವಾಗಿರುವ ಕಿಷ್ಕಿಂದಾ ಅಂಜನಾದ್ರಿ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದ್ದರೂ ಅದರ ಸಮಗ್ರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಕುರಿತು ಇದುವರೆಗೂ ಆಡಳಿತ ನಡೆಸಿದವರು ಚಿಂತನೆ ನಡೆಸಿರಲಿಲ್ಲ. ಬಿಜೆಪಿ ಸರಕಾರ ಇದೀಗ ಕಿಷ್ಕಿಂದಾ ಅಂಜನಾದ್ರಿ ಪ್ರದೇಶವನ್ನು ಪ್ರವಾಸಿತಾಣವಾಗಿಸಲು ಮತ್ತು ಆಧ್ಯಾತ್ಮದ ಕೇಂದ್ರವಾಗಿಸಲು ನೀಲನಕ್ಷೆಯೊಂದಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಿದೆ. ಅಂಜನಾದ್ರಿಯ ಕೆಳಗಡೆ ಮತ್ತು ಸುತ್ತಲಿನ ಭೂಮಿಯನ್ನಯ ವಶಕ್ಕೆ ಪಡೆದು ಪ್ರವಾಸಿ ವಸತಿಗೃಹ, ಅತಿಥಿಗೃಹ ಸೇರಿ ಶುದ್ಧಕುಡಿಯುವ ನೀರು, ಸಾಮೂಹಿಕ ಶೌಚಾಲಯ ಮತ್ತು ಬೆಟ್ಟ ಹತ್ತಲು ಅನುಕೂಲವಾಗಲು ರೂಪವೇ, ಪರಿಕ್ರಮರಸ್ತೆ ನಿರ್ಮಿಸಲು ಮತ್ತು ಹಿಟ್ನಾಳದಿಂದ ಗಂಗಾವತಿಯ ಸಾಯಿಮಂದಿರದ ವರೆಗೆ ಚತುಷ್ಪತ ರಸ್ತೆಯನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಿರ್ಮಾಣ ಮಾಡಲಾಗುತ್ತಿದೆ. ಯೋಜನೆಗಾಗಿ ಭೂಮಿ ಮನೆ ಕಳೆದುಕೊಳ್ಳುವವರಿಗೆ ಸರಕಾರ ವೈಜ್ಞಾನಿಕ ರೀತಿಯಲ್ಲಿ ನಗದು ಪರಿಹಾರ ನೀಡಲಿದೆ. ಇವುಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿಗೆ ಭೇಟಿ ನೀಡಿ ಸ್ಥಳೀಯರು, ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ : ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವುದು ಸವಾಲು: ನಿವೃತ್ತ ಅಧಿಕಾರಿ ಮುಕುಂದ್
ಆ.1 ರಂದು ಮಧ್ಯಾಹ್ನ 12 ರಂದು ಹ್ಯಾಲಿಕ್ಯಾಪ್ಟರ್ ಮೂಲಕ ಆನೆಗೊಂದಿ ಉತ್ಸವ ಮೈದಾನಕ್ಕೆ ಆಗಮಿಸಿ ರಸ್ತೆಯ ಮೂಲಕ ಅಂಜನಾದ್ರಿಗೆ ತೆರಳಿ ಬೆಟ್ಟದ ಕೆಳಗಡೆ ಇರುವ ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ ಮಾಡಲಿದ್ದಾರೆಂದರು.
ಸ್ಥಳ ಪರಿಶೀಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಬೆಟ್ಟಕ್ಕೆ ಆ.01 ರಂದು ಭೇಟಿ ನೀಡಲಿರುವ ಹಿನ್ನೆಲೆ ತಾಲೂಕಿನ ಆನೆಗೊಂದಿ ಉತ್ಸವ ಮೈದಾನದಲ್ಲಿ ನಿರ್ಮಿಸುತ್ತಿರುವ ಹ್ಯಾಲಿಪ್ಯಾಡ್ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಎಸ್ಪಿ ಅರುಣಾಂಶ್ಯು ಗುರಿ, ಎಡಿಸಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ಧಾರ್ಮಿಕ ಇಲಾಖೆಯ ಅಯ್ಯಪ್ಪ ಸುತಗುಂಡಿ, ತಹಸೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಇಒ ಮಹಾಂತೇಶಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಚನ್ನಪ್ಪಮಳಗಿ, ರಾಜೇಶ್ವರಿ ಸುರೇಶ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.