ಬೆಂಗಳೂರು: ಈ ವರ್ಷಾಂತ್ಯದಲ್ಲಿ ಮಹದಾಯಿ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಯಾಗಿರುವ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ತ್ವರಿತ ಜಾರಿಗೊಳಿಸಲು ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ನೀಡಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರಕಾರ ಗೋವಾದ ನೆಪ ಹೇಳುತ್ತ ಸಾಗಿದರೆ, ಕರ್ನಾಟಕದ ಜನತೆಗೆ ಉತ್ತರ ಹೇಳುವುದು ಕಷ್ಟವಾಗಲಿದೆ. ಗೋವಾ ವಿಧಾನಸಭೆ ಚುನಾವಣೆಗಳೂ ಮುಕ್ತಾಯವಾಗಿದ್ದು, ಈಗಲೂ ಅನಗತ್ಯ ವಿಳಂಬ ಮಾಡುವುದರಿಂದ ಸರಕಾರದ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ವಿಳಂಬ ಧೋರಣೆ ಮಾಡುವುದು ಸರಿಯಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಕೇಳಿದ ಕೇಂದ್ರ: ರಾಜ್ಯ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ಮಹದಾಯಿ ಯೋಜನೆ ಅನುಷ್ಠಾನಗೊಳಿಸುವುದರಿಂದ ಪರಿಸರದ ಮೇಲಾಗುವ ಪರಿಣಾಮ ಮತ್ತು ಹಾನಿಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದ್ದು, ಕೇಂದ್ರ ಜಲ ಆಯೋಗದ ಸೂಚನೆ ಮೇರೆಗೆ ಸಿಎಂ ಒಂದು ವಾರದ ಹಿಂದೆ ಮತ್ತೂಂದು ಪತ್ರ ಬರೆದಿದ್ದಾರೆ.
ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಬೇಕಿದೆ. ಮಹದಾಯಿ ನ್ಯಾಯಮಂಡಳಿ ಆದೇಶದಂತೆ ಕರ್ನಾಟಕದ ಪಾಲಿನ ನೀರನ್ನು ಧಾರವಾಡ-ಹುಬ್ಬಳ್ಳಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರು ಒದಗಿಸಲು ಮಲಪ್ರಭಾ ನದಿಗೆ ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಹಾದಾಯಿ ನೀರು ಹರಿಸಲು ರಾಜ್ಯ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಆಗದಿರುವುದು ಹಾಗೂ ಈ ಯೋಜನೆ ಜಾರಿಯಿಂದ ಅರಣ್ಯ ನಾಶ ಪ್ರಮಾಣ ಕಡಿಮೆ ಇದ್ದು, ಅದಕ್ಕೆ ಪರ್ಯಾಯವಾಗಿ ರಾಜ್ಯ ಸರಕಾರ ಹಾಕಿಕೊಂಡಿರುವ ಯೋಜನೆ ಕುರಿತು ಮಾಹಿತಿ ನೀಡಿ, ಆದಷ್ಟು ಶೀಘ್ರ ಅನುಮತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಗೂ ಮುನ್ನ ಚಾಲನೆ: ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಯೋಜನೆಗೆ ಅಧಿಕೃತ ಚಾಲನೆ ನೀಡಿ, ಉತ್ತರ ಕರ್ನಾಟಕ ಭಾಗದ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಸರತ್ತು ನಡೆಸಿದ್ದು, 2008ರ ಬಿಜೆಪಿ ಸರಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಮಹದಾಯಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗ ತಾವು ಮುಖ್ಯಮಂತ್ರಿಯಾಗಿರುವಾಗ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲು ಆಸಕ್ತಿ ವಹಿಸಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಣ ಮೀಸಲು: ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದ ಪಾಲಿನ ನೀರಿನ ಬಳಕೆಗೆ ಅನುವಾಗುವಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದರ ಆಧಾರದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಸಚಿವ ಸಂಪುಟ ಸಹ ಅನುಮೋದನೆಗಳನ್ನು ನೀಡಿದೆ. ಇದರಿಂದ 2.18 ಟಿಎಂಸಿ ನೀರು ಪಡೆಯುವ ಬಂಡೂರ ನಾಲಾ ತಿರುವಿಗೆ ಮತ್ತು ಕಳಸಾ ನಾಲೆಯಿಂದ 3.56 ಟಿಎಂಸಿ ಪೈಕಿ 1.72 ಟಿಎಂಸಿ ನೀರು ಪಡೆಯುವ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ 1675 ಕೋಟಿ ರೂ. ಆಡಳಿತಾತ್ಮಕ ಅನುಮೋದನೆಯನ್ನೂ ಸರಕಾರ ನೀಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ 2.18 ಟಿಎಂಸಿ ನೀರು ಪಡೆಯುವ ಬಂಡೂರಿ ಬಂಡೂರಾ ನಾಲಾ ತಿರುವಿಗೆ 791 ಕೋಟಿ ರೂ. ಪರಿಷ್ಕೃತ ಅಂದಾಜು, ಕಳಸಾ ನಾಲೆಯಿಂದ 3.56 ಟಿಎಂಸಿ ಪೈಕಿ 1.72 ಟಿಎಂಸಿ ನೀರು ಪಡೆಯುವ ಯೋಜನೆಗೆ 885.80 ಕೋಟಿ ರೂ. ಅನುಮೋದನೆ ನೀಡಿದೆ.
ಕಳಸಾ ಬಂಡೂರಿ ಯೋಜನೆಯನ್ನು ಆದಷ್ಟು ಬೇಗ ಆರಂಭಿಸಲು ರಾಜ್ಯ ಸರಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಶೀಘ್ರವೇ ಅನುಮತಿ ದೊರೆಯುವ ವಿಶ್ವಾಸ ಇದೆ. ಆದಷ್ಟು ಶೀಘ್ರ ಯೋಜನೆಗೆ ಚಾಲನೆ ನೀಡುವ ವಿಶ್ವಾಸ ಇದೆ.
-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ.