ಬೆಂಗಳೂರು: ದೆಹಲಿ ಭೇಟಿಗೆ ಸಜ್ಜಾಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರಗಳ ಬಗ್ಗೆ ವರಿಷ್ಠರ ಬಗ್ಗೆ ಪ್ರಸ್ತಾಪಿಸುವ ಸಂಬಂಧ ಸಮಾಲೋಚಿಸಿದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೆಚ್ಚುತ್ತಿರುವ ಒತ್ತಡ, ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ, ಬಸನಗೌಡ ಯತ್ನಾಳ್ ಅವರ ಆಗ್ರಹ ಮತ್ತಿತರ ವಿಚಾರವೂ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ನದಿ ಜೋಡಣೆ ಕುರಿತು ರಾಜ್ಯದ ನಿಲುವು ಕೇಂದ್ರಕ್ಕೆ ತಿಳಿಸುವ ವಿಷಯದ ಬಗ್ಗೆಯೂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶ ಸ್ಪಷ್ಟವಿದೆ: ಶಾಸಕ ರಘುಪತಿ ಭಟ್
ಯಡಿಯೂರಪ್ಪ ಭೇಟಿಗೆ ಮುನ್ನ ಆರ್. ಅಶೋಕ್ ಸೇರಿ ಹಲವು ಹಿರಿಯ ಸಚಿವರ ಜತೆಯೂ ಮುಖ್ಯಮಂತ್ರಿ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಜಲಸಂಪನ್ಮೂಲ ಹಾಗೂ ಕಾನೂನು ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದರು.