Advertisement

ಗ್ರಾಮ ಒನ್‌ ತಂಡದೊಂದಿಗೆ ಸಿಎಂ ಸಂವಾದ

04:23 PM Feb 06, 2022 | Team Udayavani |

ಕೊಪ್ಪಳ: ಗ್ರಾಮೀಣ ಭಾಗದವರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ “ಗ್ರಾಮ ಒನ್‌’ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಯೋಜನೆಗಳನ್ನು ಯಶಸ್ವಿಗೊಳಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಸೇವೆಗಳನ್ನು ಜನರ ಹತ್ತಿರ ತೆಗೆದುಕೊಂಡು ಹೋಗಲು “ಗ್ರಾಮ ಒನ್‌’ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಜನರ ಅಲೆದಾಟ ತಪ್ಪುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ತಡೆದಂತಾಗುತ್ತದೆ.

ಸರ್ಕಾರ ಗ್ರಾಮ ಒನ್‌ ಕೇಂದ್ರಗಳ ನಿರ್ವಾಹಕರಿಗೆ ಜವಾಬ್ದಾರಿ ನೀಡಿದ್ದು, ಸರ್ಕಾರದ ಸೇವೆ ಹಾಗೂ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು. ಯಾವುದೇ ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಸಕಾರಣ ನೀಡಬೇಕು. ಜನರು ಅರ್ಜಿ ಸಲ್ಲಿಸಿ ಅನಗತ್ಯ ತಿರುಗಾಡುವಂತಾಗಬಾರದು. ಈ ನಿಟ್ಟಿನಲ್ಲಿ ಎಲ್ಲಾ “ಗ್ರಾಮ ಒನ್‌’ ಕೇಂದ್ರಗಳ ನಿರ್ವಾಹಕರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಉತ್ತಮ ಕಾರ್ಯನಿರ್ವಹಿಸುವ ಗ್ರಾಮ ಒನ್‌ ಸೇವಕರಿಗೆ ರೂ. 10 ಸಾವಿರ ಪ್ರಥಮ, ರೂ. 7 ಸಾವಿರ ದ್ವಿತೀಯ ಹಾಗೂ ರೂ. 5 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ಬಹುಮಾನ
ಪ್ರಕ್ರಿಯೆ ಪ್ರತಿ ವಾರಕ್ಕೊಮ್ಮೆ ನಡೆಯಲಿದೆ. ಇದರ ಜೊತೆಗೆ ಗ್ರಾಮ ಒನ್‌ ಯೋಜನೆಯಡಿ ಉತ್ತಮ ಕೆಲಸ ನಿರ್ವಹಿಸುವಲ್ಲಿ ಆಯ್ಕೆಯಾದ ಜಿಲ್ಲೆಗೆ ಒಂದು ಲಕ್ಷ ಬಹುಮಾನ ಸಹ ನೀಡಲಾಗುವುದು ಎಂದರು.

ಇದನ್ನೂ ಓದಿ : ಪಾರ್ಕಿನ್ಸನ್ಸ್‌ ಕಾಯಿಲೆಗೆ ನೂತನ ಚಿಕಿತ್ಸೆ : ಡೀಪ್‌ ಬ್ರೈನ್‌ ಸ್ಟಿಮ್ಯುಲೇಶನ್‌

Advertisement

ಸರ್ಕಾರದ ಯಶಸ್ಸು ಗ್ರಾಮ ಒನ್‌ ಮೂಲಕ ನೀಡುವ ಸೇವೆಗಳ ಮೇಲೆ ನಿಂತಿದ್ದು, ನಿರ್ವಾಹಕರು ಉತ್ತಮ ಕೆಲಸ ನಿರ್ವಹಿಸುತ್ತೀರೆಂಬ ವಿಶ್ವಾಸವಿದೆ. ಇನ್ನೂ ಕೆಲವು ಗ್ರಾಪಂಗಳಲ್ಲಿ ಗ್ರಾಮ ಒನ್‌ ಸೇವಾ ಕೇಂದ್ರಗಳನ್ನು ಪ್ರಾರಂಭಿಸದೇ ಇರುವ ಪ್ರದೇಶಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ತ್ವರಿತವಾಗಿ ಗ್ರಾಮ ಒನ್‌ ಕೇಂದ್ರ ತೆರೆದು ಸೇವೆಗಳ ಕುರಿತು ತಮ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವ ಜೊತೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ
ದೊರೆಯುವ ಸೇವೆ ಕಾಲಮಿತಿಯಲ್ಲಿ ಸಿಗಲಿ. ಯಾವುದೇ ತಾಂತ್ರಿಕ ತೊಂದರೆಗಳು ಉಂಟಾದರೆ ಸಂಬಂಧಪಟ್ಟ ಅಧಿ ಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಸರಿಪಡಿಸಿಕೊಂಡು ಜನರಿಗೆ ತ್ವರಿತವಾಗಿ ಸೇವೆ ಒದಗಿಸಿ. ಸಿಎಂ ಘೋಷಿಸಿರುವ ಬಹುಮಾನವನ್ನು ಪಡೆದುಕೊಳ್ಳುವುದಲ್ಲದೇ ನಮ್ಮ ಜಿಲ್ಲೆಗೂ ಪ್ರಶಸ್ತಿ ಲಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಉತ್ತಮ ರೀತಿಯ ಸೇವೆ ನೀಡಬೇಕು. ಈ ಬಗ್ಗೆ ಜಿಲ್ಲಾದ್ಯಂತ ಅಗತ್ಯ ಅರಿವು ಮೂಡಿಸಿ. ಗ್ರಾಮ ಒನ್‌ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಗ್ರಾಮ ಒನ್‌ನಡಿ ನಾಗರಿಕರು, ಹಿರಿಯ ನಾಗರಿಕರು, ಮಹಿಳೆಯರು, ವಿಶೇಷಚೇತನರು ತಮ್ಮ ಗ್ರಾಮದಲ್ಲೇ ಸರ್ಕಾರದ ಸೇವೆಗಳನ್ನು ಪಡೆಯಬಹುದು. ತಾಲೂಕು, ಹೋಬಳಿ ಮಟ್ಟದ
ಕಚೇರಿಗಳಿಗೆ ಭೇಟಿ ನೀಡಲು ತಗಲುವ ಸಂಚಾರ ವೆಚ್ಚವಿಲ್ಲದೇ, ಸಮಯದ ಉಳಿತಾಯದೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ವಿಡಿಯೋ ಸಂವಾದದಲ್ಲಿ ಎಡಿಸಿ ಎಂ.ಪಿ.
ಮಾರುತಿ, ಎಸಿ ಹೇಮಂತ್‌ ಕುಮಾರ್‌, ತಹಶೀಲ್ದಾರ್‌ ಅಮರೇಶ ಬಿರಾದರ್‌, ಯು. ನಾಗರಾಜ ಹಾಗೂ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next