Advertisement

ಸವಾಲುಗಳ ನಡುವೆಯೂ ಬದ್ಧತೆಯಿಂದ ಕೆಲಸ; ವಿಪಕ್ಷಗಳ ಟೀಕೆಗೆ ಸಿಎಂ ಬೊಮ್ಮಾಯಿ ಚಾಟಿ

09:44 PM Feb 20, 2023 | Team Udayavani |

ಬೆಂಗಳೂರು: ಸಂಕಷ್ಟ ಸಮಯದಲ್ಲಿ ಹೊಣೆಗಾರಿಕೆ ವಹಿಸಿಕೊಂಡ ನಾನು ಕೋವಿಡ್‌, ಪ್ರವಾಹದಂತಹ ಸವಾಲುಗಳ ನಡುವೆಯೂ ಬದ್ಧತೆಯಿಂದ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೊರೊನಾ ಅನಂತರ ಉಂಟಾಗಿದ್ದ ಆರ್ಥಿಕ ಹಿಂಜರಿತವನ್ನು ಸರಿದಾರಿಗೆ ತಂದು ಕಳೆದ ಆರ್ಥಿಕ ವರ್ಷದಲ್ಲಿ 15 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹಿಸಿರುವುದು ರಾಜ್ಯದ ಆರ್ಥಿಕ ಚಕ್ರ ಮೇಲ್ಮುಖವಾಗಿರುವುದಕ್ಕೆ ಕನ್ನಡಿ ಎಂದು ತಿಳಿಸಿದರು.

ನಮ್ಮ ಸರಕಾರ ಏನು ಮಾಡಿದೆ ಎಂಬುದನ್ನು ಸತ್ಯ, ಸ್ಪಷ್ಟ ಮತ್ತು ನೇರವಾಗಿ ಹೇಳಿದೆ. ಸುಳ್ಳು ಹೇಳಿಸುವ ಆವಶ್ಯಕತೆ ಇಲ್ಲ. ರಾಜ್ಯಪಾಲರು ಸತ್ಯ ಮತ್ತು ವಾಸ್ತವಾಂಶದ ಆಧಾರದ ಮೇಲೆ ಭಾಷಣ ಮಾಡಿದ್ದಾರೆ. ರಾಜಕಾರಣ ಇದರಲ್ಲಿಲ್ಲ. ನೋಡುವ ದೃಷ್ಟಿಕೋನ ಸರಿ ಇರಬೇಕು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಶಿಕ್ಷಕರ ನೇಮಕಾತಿ ಬಹಳ ವರ್ಷಗಳಿಂದ ಆಗಿರಲಿಲ್ಲ. ನಾವು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಎಲ್ಲರಿಗೂ ನೇಮಕಾತಿ ಆದೇಶ ಶೀಘ್ರದಲ್ಲೇ ದೊರೆಯಲಿದೆ. ಮುಂದಿನ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರವೇಶ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾಕ ಹೆಣ್ಣುಮಕ್ಕಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಓದುತ್ತಿರುವುದು ಕಂಡುಬರುತ್ತಿದೆ. ಇದು ಸಕಾರಾತ್ಮಕ ಅಂಶ ಎಂದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಹಿಜಾಬ್‌ ವಿವಾದದ ಅನಂತರ ಹತ್ತು ಸಾವಿರ ಅಲ್ಪಸಂಖ್ಯಾಕ ಹೆಣ್ಣುಮಕ್ಕಳು ಓದು ನಿಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿ ಎಲ್ಲೆಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು. ಇದನ್ನು ಒಪ್ಪದ ಸಿಎಂ ಅದರ ಬಗ್ಗೆ ಮಾಹಿತಿ ಇದ್ದರೆ ಕೊಡಿ ನೋಡೋಣ ಎಂದರು.

ವಿ.ವಿ. ವ್ಯವಸ್ಥೆಯಲ್ಲಿ ಬದಲಾವಣೆ: ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯನ್ನು ತರಲಾಗಿದೆ. ವಿಶ್ವವಿದ್ಯಾಲಯಕ್ಕೆ ಬೇಕಾದ ಅನುದಾನ ನೀಡಲು ಸರಕಾರ ಕ್ರಮ ಕೈಗೊಂಡಿದೆ. ಮುಂದಿನ ವರ್ಷದಿಂದ ಇದರ ಪರಿಣಾಮಗಳನ್ನು ನಾವು ಕಾಣುತ್ತೇವೆ ಎಂದು ಸಿಎಂ ಹೇಳಿದರು.

ಪದವಿ ಕಾಲೇಜುಗಳ ಬಗ್ಗೆ ಗಮನಹರಿಸಬೇಕು. ಕೆಲವು ಕಡೆ ವಿದ್ಯಾರ್ಥಿಗಳು ಹೆಚ್ಚು ಇದ್ದರೂ ಕಾಲೇಜು ಇಲ್ಲ, ಮತ್ತೆ ಕೆಲವೆಡೆ ಕಾಲೇಜುಗಳು ಇದ್ದರೂ ವಿದ್ಯಾರ್ಥಿಗಳು ಇಲ್ಲ ಎಂದು ಬಿಜೆಪಿಯ ಕುಮಾರ್‌ ಬಂಗಾರಪ್ಪ ಪ್ರಸ್ತಾವಿಸಿದರು.

ಅದಕ್ಕೆ ಸಿಎಂ, ನಿಮ್ಮ ಮಾತು ಸತ್ಯ. ಆದರೆ ಕಾಲೇಜು ವಿಲೀನ ಅಥವಾ ರದ್ದು ಮಾಡಲು ಹೋದರೆ ರಾಜಕೀಯ ಒತ್ತಡ ಬರುತ್ತದೆ. ಆದರೂ ಆ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸಾರ್ವಜನಿಕ ಶೌಚಾಲಯಗಳು ಶೇ. 90ರಷ್ಟು ಬಳಕೆಗೆ ಯೋಗ್ಯವಾಗಿಲ್ಲ. ನೀರಿನ ಕೊರತೆಯಿಂದ ನಿರ್ವಹಣೆ ಮಾಡಲಾಗುತ್ತಿಲ್ಲ. ಬಹುತೇಕ ಸಾರ್ವಜನಿಕ ಶೌಚಾಲಯಗಳು ಬಾಗಿಲು ಹಾಕಿವೆ. ಹಾಗಾಗಿ ಸಾರ್ವಜನಿಕ ಶೌಚಾಲಯ ಮಾಡುವುದು ಕೈಬಿಟ್ಟು ಮನೆ ಮನೆಗೆ ಶೌಚಾಲಯ ಕೊಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗ
ಸಿಎಂ ಭಾಷಣದ ಅನಂತರ ವಿವರಣೆ ಪಡೆಯಲು ಕಾಂಗ್ರೆಸ್‌ ಸದಸ್ಯರು ಮುಂದಾದರು. ಆದರೆ ಇಬ್ಬರಿಗೆ ಮಾತ್ರ ಅವಕಾಶ ಎಂದು ಸ್ಪೀಕರ್‌ ಹೇಳಿದರು. ಸ್ಪೀಕರ್‌ ನಿಲುವು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ವಿವರಣೆ ಪಡೆಯಲು ಅವಕಾಶ ಕೊಡದ ಕ್ರಮಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಯು.ಟಿ. ಖಾದರ್‌, ನಿಮ್ಮ ಭಾಷಣ ಸದನಕ್ಕೆ ಸೀಮಿತವಾಗದಿರಲಿ, ಬಡವರಿಗೆ ರೇಷನ್‌ ಕಾರ್ಡ್‌ ಕೊಟ್ಟಿಲ್ಲ, ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ನಿಮ್ಮ ಸರಕಾರದ ಬಗ್ಗೆ ಜನ ಹೊರಗಡೆ ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯಿರಿ. ನಿಮ್ಮ ಶಾಸಕರ ಬಗ್ಗೆ ಆಕ್ರೋಶ ಇದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next