Advertisement
ಕೃಷ್ಣಾ ಮೇಲ್ದಂಡೆಗೆ ಕೇಂದ್ರದ ಸಹಕಾರ :
Related Articles
Advertisement
ಮೇಕೆದಾಟು :
ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗೆ ಮೇಕೆದಾಟು ಬಳಿ ಕಾವೇರಿ ನದಿಗೆ ಸಮಾನಾಂತರ ಜಲಾಶಯ ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಇದಕ್ಕಾಗಿ ಸುಮಾರು 9 ಸಾವಿರ ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಸುಮಾರು 60 ಟಿಎಂಸಿ ನೀರು ಸಂಗ್ರಹಿಸುವುದು ಹಾಗೂ 400 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಈ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಅಗತ್ಯವಿದೆ. ಯೋಜನೆಗೆ ಪಕ್ಕದ ತಮಿಳುನಾಡು ತಕರಾರು ತೆಗೆಯುತ್ತಿದೆ.
ಎತ್ತಿನಹೊಳೆ :
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ, ತುಮಕೂರು ಜಿಲ್ಲೆಗಳ ಬರ ನೀಗಿಸಲು 2012ರಲ್ಲಿ ಆರಂಭವಾಗಿರುವ ಎತ್ತಿನಹೊಳೆ ಯೋಜನೆ ಕುಂಟುತ್ತಲೇ ಸಾಗಿದೆ. ಇದಕ್ಕೆ ಯಾವುದೇ ಅಂತಾರಾಜ್ಯ ತಕರಾರಿಲ್ಲ. ಈ ಯೋಜನೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ರಾಜ್ಯ ಸರಕಾರಕ್ಕೆ ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಇದೆ. ಆರಂಭದಲ್ಲಿ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದ ಈ ಯೋಜನೆಗೆ ಪ್ರಸ್ತುತ 21 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಭದ್ರಾ ಯೋಜನೆ :
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಈ ಕುರಿತು ಶೀಘ್ರವೇ ಕೇಂದ್ರ ಸರಕಾರ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ನಿರೀಕ್ಷೆಯಲ್ಲಿ ರಾಜ್ಯದ್ದಾಗಿದೆ. ಸುಮಾರು 21,473 ಕೋಟಿ ರೂ. ವೆಚ್ಚದ ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದರೆ, ಕೇಂದ್ರ ಸರಕಾರ ಶೇ. 90 ರಷ್ಟು ಹಣಕಾಸು ಒದಗಿಸುತ್ತದೆ. ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾದರೆ, ಕೇಂದ್ರ 16,125 ಕೋಟಿ ರೂ. ಭರಿಸಲಿದೆ.
ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಆಂಧ್ರ, ತೆಲಂಗಾಣದ ಒಪ್ಪಿಗೆ ಅಗತ್ಯ :
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಸಮೀಪ ಸಮತೋಲನ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಯೋಜನಾ ವರದಿ ಸಿದ್ಧಪಡಿಸಲು 14.20 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ನವಲಿ ಸಮತೋಲಿತ ಜಲಾಶಯ ನಿರ್ಮಾಣದಿಂದ ಪ್ರಸ್ತುತ ತುಂಗ ಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 130 ಟಿಎಂಸಿಯಷ್ಟು ಇದ್ದರೂ 31.616 ಟಿಎಂಸಿಯಷ್ಟು ಹೂಳು ತುಂಬಿರುವ ಕಾರಣದಿಂದ ಕನಿಷ್ಟ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಈ ಯೋಜನೆ ಜಾರಿಗೊಳ್ಳಲು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಸಹಮತ ಅಗತ್ಯವಿದೆ.
– ಶಂಕರ ಪಾಗೋಜಿ